ಅಲ್ಲಿ ಸಮಾಧಿಗಳ ದ್ವೀಪವಿದೆ, ಮೌನ ದ್ವೀಪ. ಅಲ್ಲೇ ನನ್ನ ಯೌವ್ವನದ ಸಮಾಧಿಗಳೂ ಇವೆ. ನಾನು ಅಲ್ಲಿ ಜೀವನದ ನಿತ್ಯಹಸಿರಿನ ಹಾರವನ್ನು ತೆಗೆದುಕೊಂಡು ಹೋಗಬೇಕಿದೆ.
ನನ್ನ ಹೃದಯದಲ್ಲಿ ಈ ಸಂಕಲ್ಪ ಮಾಡಿಕೊಂಡು ನಾನು ಸಮುದ್ರ ದಾಟಿ ಪ್ರಯಾಣಿಸಿದೆ.
ಓ ನನ್ನ ಯೌವನದ ದೃಶ್ಯಗಳೇ ಮತ್ತು ನೆನಪುಗಳೇ! ಓ ಪ್ರೀತಿಯ ಕಿರಣಗಳೇ, ಬೇಗನೆ ಕಳೆದುಹೋದ ದೈವಿಕ ಕಿರಣಗಳೇ! ನೀವು ನನ್ನ ಜೀವನದಿಂದ ಏಕೆ ಇಷ್ಟು ಬೇಗ ಮರೆಯಾದಿರಿ? ಇಂದು ನಾನು ನಿಮ್ಮನ್ನು ನನ್ನ ಮೃತರಂತೆ ನೆನಪಿಸಿಕೊಳ್ಳುತ್ತೇನೆ.
ನನ್ನ ಪ್ರಿಯ ಮೃತರೇ, ನಿಮ್ಮಿಂದ ಒಂದು ಮಧುರ ಸುಗಂಧ ಬರುತ್ತಿದೆ; ಅದು ನನ್ನ ಹೃದಯವನ್ನು ಅರಳಿಸಿ ಕರಗಿಸುತ್ತದೆ. ನಿಜವಾಗಿಯೂ ಅದು ಏಕಾಂಗಿ ನಾವಿಕನ ಹೃದಯವನ್ನು ನಡುಗಿಸಿ ತೆರೆಯುತ್ತದೆ.
ನಾನು ಅತ್ಯಂತ ಏಕಾಂಗಿಯಾಗಿದ್ದರೂ ಸಹ, ಇನ್ನೂ ಅತ್ಯಂತ ಶ್ರೀಮಂತನೂ ಅಸೂಯೆಪಡಬೇಕಾದವನೂ ಆಗಿದ್ದೇನೆ. ಏಕೆಂದರೆ ನಾನು ಒಮ್ಮೆ ನಿಮ್ಮನ್ನು ಹೊಂದಿದ್ದೆ, ಮತ್ತು ನೀವು ಇಂದಿಗೂ ನನ್ನನ್ನು ಹೊಂದಿದ್ದೀರಿ. ಹೇಳಿ, ನನಗೆ ದೊರೆತಂತಹ ಸುಂದರ ಉಡುಗೊರೆಗಳು ಇನ್ನಾರಿಗಾದರೂ ದೊರೆತಿವೆಯೇ?
ನಾನು ಇನ್ನೂ ನಿಮ್ಮ ಪ್ರೀತಿಯ ಮತ್ತು ನೀವು ಬಿಟ್ಟುಹೋದ ಪರಂಪರೆಯ ವಾರಸುದಾರನಾಗಿದ್ದೇನೆ. ನನ್ನ ಪ್ರಿಯರೇ, ನಿಮ್ಮ ಸವಿನೆನಪಿನಲ್ಲಿ ಹಲವು ಬಣ್ಣಗಳ, ಕಾಡಿನಲ್ಲಿ ತಾನಾಗಿಯೇ ಬೆಳೆಯುವ ಸದ್ಗುಣಗಳೊಂದಿಗೆ ನಾನು ಅರಳುತ್ತಿದ್ದೇನೆ!
ಓ ನನ್ನ ಪ್ರಿಯರೇ, ನಾವು ಒಬ್ಬರಿಗೊಬ್ಬರು ಹತ್ತಿರವಾಗಿಯೇ ಉಳಿಯಬೇಕಿತ್ತು, ಓ ದಯಾಳು ವಿಚಿತ್ರ ಅದ್ಭುತಗಳೇ. ನೀವು ಹೆದರಿದ ಪಕ್ಷಿಗಳಂತೆ ನನ್ನ ಬಳಿಗೆ ಮತ್ತು ನನ್ನ ಹಂಬಲದ ಕಡೆಗೆ ಬರಲಿಲ್ಲ; ಬದಲಾಗಿ, ನಿಮ್ಮನ್ನು ನಂಬಿದ ಒಬ್ಬ ವ್ಯಕ್ತಿಯ ಬಳಿಗೆ ನೀವು ನಂಬಿಕೆಯಿಟ್ಟು ಬಂದಿರಿ.
ನನ್ನಂತೆಯೇ ನೀವು ನಿಷ್ಠೆಯ ಮತ್ತು ಶಾಶ್ವತ ಪ್ರೀತಿಗಾಗಿ ಸೃಷ್ಟಿಯಾದವರು. ಆದರೂ ಈಗ ನಾನು ನಿಮ್ಮನ್ನು ಅನಿಷ್ಠರೆಂದು ಕರೆಯಬೇಕಾಗಿದೆ, ಓ ದೈವಿಕ ನೋಟಗಳೇ ಮತ್ತು ಕ್ಷಣಿಕ ಕಿರಣಗಳೇ, ಏಕೆಂದರೆ ನೀವು ಇಷ್ಟು ಬೇಗ ಮಾಯವಾದಿರಿ. ನನಗೆ ಇನ್ನೂ ಬೇರೆ ಯಾವುದೇ ಹೆಸರು ತಿಳಿಯುತ್ತಿಲ್ಲ.
ನಿಜವಾಗಿಯೂ, ನೀವು ನನಗಾಗಿ ತುಂಬಾ ಬೇಗ ಅಳಿದು ಹೋದಿರಿ, ಎಲೈ ಪಲಾಯನಗೈದವರೇ. ಆದರೂ ನೀವು ನನ್ನಿಂದ ಓಡಿಹೋಗಲಿಲ್ಲ, ನಾನೂ ನಿಮ್ಮಿಂದ ಓಡಿಹೋಗಲಿಲ್ಲ. ಈ ದೂರವಾಗುವಿಕೆಯಲ್ಲಿ ನಾವು ಒಬ್ಬರಿಗೊಬ್ಬರು ನಿರಪರಾಧಿಗಳಾಗಿದ್ದೇವೆ.
ನನ್ನನ್ನು ಕೊಲ್ಲಲು ಅವರು ನಿಮ್ಮನ್ನು ಉಸಿರುಗಟ್ಟಿಸಿ ಕೊಂದರು, ಓ ನನ್ನ ಭರವಸೆಗಳ ಹಾಡುವ ಪಕ್ಷಿಗಳೇ. ಹೌದು, ನನ್ನ ಪ್ರಿಯರೇ, ದುರುದ್ದೇಶವು ಯಾವಾಗಲೂ ತನ್ನ ಬಾಣಗಳನ್ನು ನಿಮ್ಮ ಕಡೆಗೆ ಗುರಿಮಾಡಿತು, ಏಕೆಂದರೆ ನಿಮ್ಮ ಮೂಲಕ ಅದು ನನ್ನ ಹೃದಯವನ್ನು ಹೊಡೆಯಬಹುದಾಗಿತ್ತು.
ಮತ್ತು ಅವು ನನ್ನ ಹೃದಯಕ್ಕೆ ತಗುಲಿದವು! ಏಕೆಂದರೆ ನೀವು ಯಾವಾಗಲೂ ನನ್ನ ಅತ್ಯಂತ ಪ್ರಿಯ ಸಂಪತ್ತಾಗಿದ್ದಿರಿ, ನನ್ನ ಸ್ವತ್ತಾಗಿದ್ದಿರಿ ಮತ್ತು ನನ್ನನ್ನು ಆಳುತ್ತಿದ್ದವರಾಗಿದ್ದಿರಿ; ಅದಕ್ಕಾಗಿಯೇ ನೀವು ಚಿಕ್ಕ ವಯಸ್ಸಿನಲ್ಲೇ, ತುಂಬಾ ಬೇಗ ಸಾಯಬೇಕಾಯಿತು.
ನಿಮ್ಮ ಸ್ವಭಾವ ಹಕ್ಕಿಪುಕ್ಕಗಳಂತೆ ಮೃದುವಾಗಿತ್ತು, ಅಥವಾ ಅದಕ್ಕಿಂತಲೂ ಮೃದುವಾಗಿ, ಒಂದು ನೋಟದಲ್ಲೇ ಮಾಯವಾಗುವ ನಗುವಿನಂತಿತ್ತು. ಅದೇ ಕಾರಣದಿಂದ, ಅವರು ತಮ್ಮ ಬಾಣಗಳನ್ನು ನನ್ನ ಅತ್ಯಂತ ದುರ್ಬಲ ಬಾಗದೆಡೆಗೆ ಹೊಡೆದರು—ಅಂದರೆ, ನಿಮ್ಮ ಕಡೆಗೆ.
ಆದರೆ ಈ ಮಾತನ್ನು ನಾನು ನನ್ನ ಶತ್ರುಗಳಿಗೆ ಹೇಳುತ್ತೇನೆ: ನೀವು ನನಗೆ ಮಾಡಿದದ್ದರ ಮುಂದೆ ಸಾಮಾನ್ಯ ಕೊಲೆಗಳೆಲ್ಲ ಏನು ಮಹತ್ವ ಹೊಂದಿವೆ?
ಎಲ್ಲಾ ನರಹತ್ಯೆಗಳಿಗಿಂತಲೂ ಘೋರವಾದ ಕೆಡಕನ್ನು ನೀವು ನನಗೆ ಮಾಡಿದ್ದೀರಿ; ಎಂದಿಗೂ ಮರಳಿ ಪಡೆಯಲಾಗದ್ದನ್ನು ನೀವು ನನ್ನಿಂದ ಕಸಿದುಕೊಂಡಿದ್ದೀರಿ:—ಹೀಗೆ ನಾನು ನಿಮಗೆ ಹೇಳುತ್ತಿದ್ದೇನೆ, ನನ್ನ ಶತ್ರುಗಳೇ!
ನೀವು ನನ್ನ ಯೌವ್ವನದ ಕನಸುಗಳನ್ನೂ ನನ್ನ ಅತ್ಯಂತ ಪ್ರಿಯ ಅದ್ಭುತಗಳನ್ನೂ ಕೊಲ್ಲಲಿಲ್ಲವೇ? ನನ್ನ ಆಟದ ಸಂಗಾತಿಗಳಾದ ಆ ಧನ್ಯ ಆತ್ಮಗಳನ್ನು ನನ್ನಿಂದ ಕಸಿದುಕೊಂಡಿರಿ. ಅವರ ನೆನಪಿಗಾಗಿ ನಾನು ಈ ಹಾರವನ್ನೂ ಈ ಶಾಪವನ್ನೂ ಅರ್ಪಿಸುತ್ತೇನೆ.
ಈ ಶಾಪ ನಿಮ್ಮ ಮೇಲೆ ಬೀಳಲಿ, ಓ ನನ್ನ ಶತ್ರುಗಳೇ! ತಣ್ಣನೆಯ ರಾತ್ರಿಯಲ್ಲಿ ಸ್ವರವೊಂದು ಅಡಗಿ ಹೋಗುವಂತೆ, ನೀವು ನನ್ನ ಅನಂತತೆಯನ್ನು ಅತಿ ಸಂಕ್ಷಿಪ್ತಗೊಳಿಸಲಿಲ್ಲವೇ?, ಅದು ನನಗೆ ಕೇವಲ ಒಂದು ಕ್ಷಣ ಮಾತ್ರ ಬಂದಿತು—ದೈವಿಕ ಕಣ್ಣುಗಳ ಮಿನುಗಿನಂತೆ, ಕ್ಷಣಿಕ ಬೆಳಕಿನ ಕಿರಣದಂತೆ.
ಒಮ್ಮೆ, ಒಂದು ಸಂತೋಷದ ಕ್ಷಣದಲ್ಲಿ, ನನ್ನ ಪಾವಿತ್ರ್ಯತೆ ಹೀಗೆ ಹೇಳಿತು: “ನನಗೆ ಎಲ್ಲವೂ ದೈವಿಕವಾಗಿರುತ್ತದೆ.” ಆದರೆ ನಂತರ ನೀವು ಅಶುದ್ದವಾದ ಭ್ರಮೆಗಳ ಮೂಲಕ ನನ್ನನ್ನು ಕಾಡಿದಿರಿ. ಅಹ್, ಆ ಸಂತೋಷದ ಕ್ಷಣ ಈಗ ಎಲ್ಲಿಗೆ ಹೋಯಿತು?
“ನನಗೆ ಎಲ್ಲಾ ದಿನಗಳೂ ಪವಿತ್ರವಾಗಿರುತ್ತವೆ,” ಎಂದು ನನ್ನ ಯೌವ್ವನದ ಜ್ಞಾನ ಹೇಳಿತ್ತು. ನಿಜವಾಗಿಯೂ ಅದು ಸಂತೋಷಭರಿತ ಜ್ಞಾನದ ಭಾಷೆಯಾಗಿತ್ತು.
ಆದರೆ ನನ್ನ ಶತ್ರುಗಳೇ, ನೀವು ನನ್ನ ರಾತ್ರಿಗಳನ್ನು ಕದ್ದು ನಿದ್ರಾಹೀನ ಯಾತನೆಗೆ ಒಪ್ಪಿಸಿದಿರಿ. ಅಹ್, ಆ ಸಂತೋಷದ ಜ್ಞಾನ ಎಲ್ಲಿಗೆ ಮಾಯವಾಯಿತು?
ಒಮ್ಮೆ ನಾನು ಶುಭ ಸೂಚನೆಗಳಿಗಾಗಿ ಹಂಬಲಿಸಿದ್ದೆ. ಆಗ ನೀವು ನನ್ನ ಮುಂದೆ ಗೂಬೆಯಂತಹ ಭಯಾನಕ ಅಶುಭ ಸಂಕೇತವನ್ನು ತಂದಿರಿ. ಅಹ್, ಆಗ ನನ್ನ ಮೃದುವಾದ ಹಂಬಲ ಎಲ್ಲಿಗೆ ಓಡಿಹೋಯಿತು?
ಒಮ್ಮೆ ನಾನು ಎಲ್ಲ ದ್ವೇಷವನ್ನೂ ತ್ಯಜಿಸುವೆನೆಂದು ಪ್ರತಿಜ್ಞೆ ಮಾಡಿದ್ದೆ. ಆದರೆ ನೀವು ನನಗೆ ಅತ್ಯಂತ ಹತ್ತಿರದವರನ್ನೂ ಪ್ರಿಯರಾದವರನ್ನೂ ನೋವಿನ ಗಾಯಗಳನ್ನಾಗಿ ಮಾಡಿಬಿಟ್ಟಿರಿ. ಅಹ್, ನನ್ನ ಅತ್ಯುನ್ನತ ಪ್ರತಿಜ್ಞೆ ಎಲ್ಲಿಗೆ ಹೋಯಿತು?
ಒಮ್ಮೆ ನಾನು ಕುರುಡನಂತೆ ಧನ್ಯ ಮಾರ್ಗಗಳಲ್ಲಿ ನಡೆಯುತ್ತಿದ್ದೆ. ಆದರೆ ನೀವು ಆ ಕುರುಡನ ದಾರಿಯಲ್ಲಿ ಕೆಸರನ್ನು ಎಸೆದಿರಿ. ಈಗ ಅವನಿಗೆ ಒಮ್ಮೆ ಪ್ರೀತಿಸಿದ್ದ ಆ ಹಳೆಯ ದಾರಿಯೇ ಅಸಹ್ಯವಾಗಿದೆ.
ನಾನು ನನ್ನ ಅತ್ಯಂತ ಕಠಿಣ ಕಾರ್ಯವನ್ನು ಪೂರ್ಣಗೊಳಿಸಿ, ನನ್ನ ಸಾಧನೆಗಳ ವಿಜಯೋತ್ಸವವನ್ನು ಆಚರಿಸುತ್ತಿದ್ದಾಗ, ನನ್ನನ್ನು ಪ್ರೀತಿಸಿದವರಿಂದಲೇ “ಅವನು ನಮ್ಮನ್ನು ಅತ್ಯಂತ ನೋಯಿಸಿದ್ದಾನೆ” ಎಂದು ಹೇಳಿಸಿದಿರಿ.
ನಿಜವಾಗಿ, ಇದು ಯಾವಾಗಲೂ ನಿಮ್ಮ ಕೆಲಸವೇ ಆಗಿತ್ತು. ನೀವು ನನ್ನ ಅತ್ಯಂತ ಸಿಹಿಯಾದ ಜೇನನ್ನು ಕಹಿಯಾಗಿಸಿದ್ದೀರಿ ಮತ್ತು ನನ್ನ ಅತ್ಯುತ್ತಮ ಜೇನುನೊಣಗಳ ಪರಿಶ್ರಮವನ್ನು ಹಾಳುಮಾಡಿದ್ದೀರಿ.
ನನ್ನ ದಯೆಯ ಕಡೆಗೆ ನೀವು ಯಾವಾಗಲೂ ಅತ್ಯಂತ ನಿರ್ಲಜ್ಜ ಭಿಕ್ಷುಕರನ್ನು ಕಳುಹಿಸಿದ್ದೀರಿ. ನನ್ನ ಕರುಣೆಯ ಸುತ್ತ ನೀವು ನಾಚಿಕೆ ಎಂಬುದೇ ಇಲ್ಲದವರನ್ನು ಕೂಡಿಸಿದ್ದೀರಿ. ಹೀಗೆ ನೀವು ನನ್ನ ಸದ್ಗುಣದ ಮೇಲಿನ ನಂಬಿಕೆಯನ್ನು ಗಾಯಗೊಳಿಸಿದ್ದೀರಿ.
ಮತ್ತು ನಾನು ನನ್ನ ಅತ್ಯಂತ ಪವಿತ್ರವಾದುದನ್ನು ಬಲಿಯಾಗಿ ಅರ್ಪಿಸಿದಾಗ, ನಿಮ್ಮ ಭಕ್ತಿಯು ತಕ್ಷಣವೇ ತನ್ನ ದೊಡ್ಡ ಉಡುಗೊರೆಗಳನ್ನು ಅದರ ಪಕ್ಕದಲ್ಲಿ ಇಟ್ಟಿತು. ಅದರ ಪರಿಣಾಮವಾಗಿ ನನ್ನ ಪವಿತ್ರ ಅರ್ಪಣೆ ನಿಮ್ಮ ಅತಿರೇಕದ ಪ್ರದರ್ಶನದಲ್ಲಿ ಮುಚ್ಚಿ ಉಸಿರುಗಟ್ಟಿ ಹೋಯಿತು.
ಒಮ್ಮೆ ನಾನು ಹಿಂದೆಂದೂ ನೃತ್ಯ ಮಾಡದ ರೀತಿಯಲ್ಲಿ ನೃತ್ಯ ಮಾಡಲು ಬಯಸಿದ್ದೆ. ನಾನು ಎಲ್ಲಾ ಸ್ವರ್ಗಗಳ ಮೀರಿದಂತೆ ನೃತ್ಯ ಮಾಡಲು ಬಯಸಿದ್ದೆ. ಆದರೆ ನೀವು ನನ್ನ ಅತ್ಯಂತ ಪ್ರಿಯ ಸಂಗೀತಗಾರನನ್ನು ನನ್ನಿಂದ ದೂರ ಮಾಡಿಬಿಟ್ಟಿರಿ.
ಈಗ ಅವನು ಭಯಾನಕ ಮತ್ತು ದುಃಖಭರಿತ ಸಂಗೀತವನ್ನು ನುಡಿಸುತ್ತಿದ್ದಾನೆ. ಅಯ್ಯೋ, ಅದು ನನ್ನ ಕಿವಿಗಳಿಗೆ ಶೋಕದ ಕೊಂಬಿನ ಧ್ವನಿಯಂತೆ ಕೇಳಿಸುತ್ತದೆ.
ಓ ಕೊಲೆಗಡುಕ ಸಂಗೀತಗಾರನೇ, ದುಷ್ಟತೆಯ ಸಾಧನವೇ, ಆದರೂ ಅತ್ಯಂತ ನಿರಪರಾಧ ಸಾಧನವೂ ನೀನೇ! ನಾನು ನನ್ನ ಅತ್ಯುನ್ನತ ನೃತ್ಯಕ್ಕೆ ಈಗಾಗಲೇ ಸಿದ್ಧನಾಗಿದ್ದೆ, ಆದರೆ ನಿನ್ನ ಸಂಗೀತವು ನನ್ನ ಪರಮಾನಂದವನ್ನೇ ಕೊಂದುಹಾಕಿತು.
ಅತ್ಯುನ್ನತ ವಿಷಯಗಳನ್ನು ವ್ಯಕ್ತಪಡಿಸಲು ನನಗೆ ತಿಳಿದಿರುವ ಮಾರ್ಗ ನೃತ್ಯ ಮಾತ್ರ. ಆದರೆ ಈಗ ನನ್ನ ಮಹತ್ತರ ರೂಪಕವು ನನ್ನ ದೇಹದೊಳಗೇ ನುಡಿಯಲಾಗದೆ ಉಳಿದಿದೆ.
ನನ್ನ ಅತ್ಯುನ್ನತ ಭರವಸೆ ನೆರವೇರದೆ ಮತ್ತು ನುಡಿಯಲಾಗದೆ ಉಳಿದಿದೆ. ಅದರೊಂದಿಗೆ ನನ್ನ ಯೌವ್ವನದ ಎಲ್ಲಾ ಕನಸುಗಳೂ ಸಾಂತ್ವನಗಳೂ ನಾಶವಾಗಿವೆ.
ನಾನು ಇದನ್ನೆಲ್ಲ ಹೇಗೆ ಸಹಿಸಿಕೊಂಡೆ? ಇಂತಹ ಗಾಯಗಳಿಂದ ನಾನು ಹೇಗೆ ಬದುಕಿ ಹೊರಬಂದೆ? ನನ್ನ ಆತ್ಮವು ಆ ಸಮಾಧಿಗಳಿಂದ ಮತ್ತೆ ಹೇಗೆ ಎದ್ದುನಿಂತಿತು?
ಹೌದು, ನನ್ನೊಳಗೆ ಗಾಯಗೊಳಿಸಲಾಗದ ಮತ್ತು ಸಮಾಧಿ ಮಾಡಲಾಗದ ಒಂದು ಶಕ್ತಿ ಇದೆ. ಅದು ಬಂಡೆಗಳನ್ನೇ ಒಡೆದುಹಾಕಬಲ್ಲದು. ಅದನ್ನು ನನ್ನ ಸಂಕಲ್ಪಶಕ್ತಿ ಎಂದು ಕರೆಯುತ್ತಾರೆ. ಮೌನವಾಗಿ ಮತ್ತು ಬದಲಾಗದೆ ಅದು ವರ್ಷಗಳಾಚೆ ಮುಂದುವರಿಯುತ್ತದೆ.
ನನ್ನ ಹಳೆಯ ಸಂಕಲ್ಪವು ನನ್ನ ಜೀವನದೊಳಗೆ ತನ್ನದೇ ದಾರಿಯಲ್ಲಿ ಸಾಗುತ್ತದೆ. ಅದರ ಸ್ವಭಾವ ಗಟ್ಟಿಯಾಗಿದೆ ಮತ್ತು ಅಜೇಯವಾಗಿದೆ.
ನಾನು ಅಜೇಯನಾಗಿರುವುದು ನನ್ನ ಹಿಮ್ಮಡಿಯಲ್ಲಿರುವ ಆ ಶಕ್ತಿಯ ಕಾರಣದಿಂದ ಮಾತ್ರ. ಓ ನನ್ನ ಹಳೆಯ ಸಂಕಲ್ಪವೇ, ನೀನು ಇನ್ನೂ ಅಲ್ಲಿಯೇ ಜೀವಂತವಾಗಿರುವೆ, ಸದಾ ಒಂದೇ ರೀತಿಯಾಗಿ, ಸದಾ ಸಹನೆಯಿಂದ. ಪ್ರತಿಯೊಂದು ಸಮಾಧಿಯ ಬಂಧನಗಳನ್ನು ನೀನು ಒಡೆದಿರುವೆ.
ನನ್ನ ಯೌವನದಲ್ಲಿ ಎಂದಿಗೂ ನೆರವೇರದ ಎಲ್ಲವೂ ಇನ್ನೂ ನಿನ್ನೊಳಗೆ ಜೀವಂತವಾಗಿದೆ. ಯೌವ್ವನ ಮತ್ತು ಜೀವನದಂತೆಯೇ ನೀನು ಸಮಾಧಿಗಳ ಹಳದಿ ಅವಶೇಷಗಳ ನಡುವೆ ಆಶಾಭಾವದಿಂದ ಕುಳಿತಿರುವೆ.
ಹೌದು, ನೀನು ಇನ್ನೂ ನನಗಾಗಿ ಎಲ್ಲಾ ಸಮಾಧಿಗಳನ್ನು ಧ್ವಂಸಗೊಳಿಸುವವನಾಗಿರುವೆ. ನಿನಗೆ ಜಯವಾಗಲಿ, ಓ ನನ್ನ ಸಂಕಲ್ಪವೇ! ಮತ್ತು ಸಮಾಧಿಗಳಿರುವಲ್ಲೇ ಪುನರುತ್ಥಾನಗಳೂ ಇರುತ್ತವೆ.
ಹೀಗೆ ಹಾಡಿದನು ಜರಥುಷ್ಟ್ರ.
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ