ಸೋಮವಾರ, ಜೂನ್ 8, 2026

37. ನಿರ್ಮಲ ಗ್ರಹಿಕೆ

ಸೋಮವಾರ, ಜೂನ್ 8, 2026
ನಿನ್ನೆ ಸಂಜೆ ಚಂದ್ರನು ಉದಯಿಸಿದಾಗ, ಅವನು ಸೂರ್ಯನಿಗೆ ಜನ್ಮ ನೀಡಲಿರುವಂತೆ ನನಗೆ ಭಾಸವಾಯಿತು. ಅವನು ಆಕಾಶದ ಅಂಚಿನಲ್ಲಿ ಎಷ್ಟು ವಿಶಾಲವಾಗಿ ಮತ್ತು ತುಂಬಿದಂತೆ ಕಾಣುತ್ತಿದ್ದನು.

ಆದರೆ ಅದರ ಗರ್ಭಧಾರಣೆ ಸುಳ್ಳಾಗಿತ್ತು. ಚಂದ್ರನಲ್ಲಿರುವ ಹೆಣ್ಣಿಗಿಂತ ಹೆಚ್ಚಾಗಿ ಚಂದ್ರನಲ್ಲಿರುವ ಗಂಡನ್ನೇ ನಂಬುತ್ತೇನೆ.

ನಿಜ ಹೇಳುವುದಾದರೆ, ಆ ರಾತ್ರಿ ಅಲೆದಾಡುವ ಭಯಭೀತ ಗಂಡು ಕೂಡ ಅಷ್ಟಕ್ಕಷ್ಟೆ. ಅವನು ಅಪರಾಧಬಾವದೊಂದಿಗೆ ಮನೆಯ ಸೂರುಗಳ ಮೇಲೆ ಅವಿತು ತಿರುಗಾಡುತ್ತಾನೆ.

ಏಕೆಂದರೆ ಚಂದ್ರನಲ್ಲಿರುವ ಆ ಸನ್ಯಾಸಿ, ಆಸೆಬುರುಕನೂ ಹೊಟ್ಟೆಕಿಚ್ಚುಳ್ಳವನೂ ಆಗಿದ್ದಾನೆ—ಭೂಮಿಗಾಗಿ ಮತ್ತು ಪ್ರೇಮಿಗಳ ಎಲ್ಲಾ ಆನಂದಕ್ಕಾಗಿ ದುರಾಸೆಪಡುತ್ತಾನೆ.

ಇಲ್ಲ, ಆ ಮನೆಮೇಲಿನ ಗಂಡುಬೆಕ್ಕು ನನಗೆ ಇಷ್ಟವಿಲ್ಲ. ಅರ್ಧ ಮುಚ್ಚಿದ ಕಿಟಕಿಗಳ ಸುತ್ತ ಸುಳಿದಾಡುವ ಯಾರನ್ನು ಕಂಡರೂ ನನಗೆ ಅಸಹ್ಯವಾಗುತ್ತದೆ.

ನಕ್ಷತ್ರಗಳ ಹಾಸಿನ ಮೇಲೆ ಅವನು ಭಕ್ತಿಯಿಂದ, ಸದ್ದಿಲ್ಲದೆ ಅವಿತು ಹೆಜ್ಜೆ ಹಾಕುತ್ತಾನೆ. ಆದರೆ ಒಂದು ಚಿಕ್ಕ ಗಂಟೆಯ ಶಬ್ದವೂ ಕೇಳಿಸದಷ್ಟು ಮೃದುವಾಗಿ ನಡೆಯುವ ಪಾದಗಳನ್ನು ನಾನು ಇಷ್ಟಪಡುವುದಿಲ್ಲ.

ಪ್ರಾಮಾಣಿಕನ ಪ್ರತಿಯೊಂದು ಹೆಜ್ಜೆಯೂ ಸ್ಪಷ್ಟವಾಗಿ ಮಾತನಾಡುತ್ತದೆ. ಆದರೆ ಬೆಕ್ಕು ನೆಲದ ಮೇಲೆ ಕಳ್ಳತನದಲ್ಲಿ ನಡೆಯುತ್ತದೆ. ನೋಡಿ, ಚಂದ್ರನು ಬೆಕ್ಕಿನಂತೆ—ರಹಸ್ಯವಾಗಿ, ಅಪ್ರಾಮಾಣಿಕವಾಗಿ ಬರುತ್ತಾನೆ.

ಪವಿತ್ರ ಜ್ಞಾನಿಗಳೇ, ನಿಮ್ಮಂತಹ ಭಾವುಕ ಕಪಟಿಗಳಿಗಾಗಿ ಈ ಉಪಮೆಯನ್ನು ಹೇಳುತ್ತಿದ್ದೇನೆ. ನಾನು ನಿಮ್ಮನ್ನು ಆಸೆಭುರುಕರು ಎಂದು ಕರೆಯುತ್ತೇನೆ.

ನೀವೂ ಸಹ ಭೂಮಿಯನ್ನು ಮತ್ತು ಭೌತಿಕ ಜೀವನವನ್ನು ಪ್ರೀತಿಸುತ್ತೀರಿ. ನಾನು ನಿಮ್ಮನ್ನು ಸರಿಯಾಗಿ ಅರಿತಿದ್ದೇನೆ. ಆದರೆ ನಿಮ್ಮ ಪ್ರೀತಿಯಲ್ಲಿ ನಾಚಿಕೆಯಿದೆ ಮತ್ತು ಅಪರಾಧಬೋಧನೆಯೂ ಇದೆ— ನೀವೂ ಚಂದ್ರನಂತೆಯೇ ಇದ್ದೀರಿ.

ನಿಮ್ಮ ಆತ್ಮಕ್ಕೆ ಭೌತಿಕ ಸಂಗತಿಗಳನ್ನು ತಿರಸ್ಕರಿಸಲು ಕಲಿಸಲಾಗಿದೆ; ಆದರೆ ನಿಮ್ಮ ಅಂತರಂಗಕ್ಕೆ ಅದನ್ನು ಕಲಿಸಲು ಸಾಧ್ಯವಾಗಿಲ್ಲ. ಮತ್ತು ಆ ಅಂತರಂಗವೇ ನಿಮ್ಮಲ್ಲಿರುವ ಅತ್ಯಂತ ಬಲವಾದ ಅಂಶವಾಗಿದೆ.

ಈಗ ನಿಮ್ಮ ಆತ್ಮವು ತನ್ನ ಅಂತರಂಗದ ಸೇವೆ ಮಾಡಲು ನಾಚಿಕೆಪಡುತ್ತಿದೆ. ಮತ್ತು ಅದು ತನ್ನದೇ ನಾಚಿಕೆಯಿಂದ ತಪ್ಪಿಸಿಕೊಳ್ಳಲು ತಿರುವುಮರುವುಗಳ ಮತ್ತು ಅಪ್ರಾಮಾಣಿಕ ದಾರಿಗಳನ್ನು ಹಿಡಿಯುತ್ತದೆ.

“ನಾಲಿಗೆಯನ್ನು ಹೊರಹಾಕಿಕೊಂಡಿರುವ ನಾಯಿಯಂತೆ ಅಲ್ಲದೇ, ಜೀವನವನ್ನು ಯಾವುದೇ ಆಸೆಯಿಲ್ಲದೆ ನೋಡುವುದು, ನನಗೆ ಅತ್ಯುನ್ನತವಾದುದು ಬಹುಶಃ ಇದೇ ಇರಬಹುದು.” ಎಂದು ನಿಮ್ಮ ವಂಚಕ ಆತ್ಮವು ತನ್ನಲ್ಲೇ ಹೇಳಿಕೊಳ್ಳುತ್ತದೆ,

“ಸ್ವಾರ್ಥದ ಹಿಡಿತ ಮತ್ತು ದುರಾಶೆಯಿಂದ ಮುಕ್ತವಾಗಿ, ಸತ್ತ ಇಚ್ಚಾಶಕ್ತಿಯೊಂದಿಗೆ, ಕೇವಲ ನೋಡುವುದರಲ್ಲೇ ಸಂತೋಷವಾಗಿರುವುದು - ಸಂಪೂರ್ಣ ತಣ್ಣಗೆ ಮತ್ತು ಬೂದು ಬಣ್ಣಕ್ಕೆ ತಿರುಗಿದ, ಅಮಲೇರಿದ ಚಂದ್ರನ ಕಣ್ಣುಗಳೊಂದಿಗೆ!”

“ಚಂದ್ರನು ಭೂಮಿಯನ್ನು ಪ್ರೀತಿಸುವಂತೆ ಭೂಮಿಯನ್ನು ಪ್ರೀತಿಸುವುದು, ಮತ್ತು ಅದರ ಸೌಂದರ್ಯವನ್ನು ಕೇವಲ ಕಣ್ಣುಗಳ ಮೂಲಕ ಅನುಭವಿಸುವುದು. ಅದೇ ನನಗೆ ಅತ್ಯಂತ ಪ್ರಿಯವಾದುದು,” ಎಂದು ಮೋಸಹೋದವನು ತನ್ನನ್ನೇ ಮೋಸಗೊಳಿಸುತ್ತಾನೆ.

ಮತ್ತು ಇದನ್ನೇ ನಾನು ನಿರ್ಮಲ ಗ್ರಹಿಕೆ ಎಂದು ಕರೆಯುತ್ತೇನೆ: ವಸ್ತುಗಳಿಂದ ಏನನ್ನೂ ಬಯಸದೇ, ಅವುಗಳ ಮುಂದೆ ನೂರು ಮುಖಗಳ ಕನ್ನಡಿಯಂತೆ ಮಲಗಲು ಅವಕಾಶವನ್ನು ಮಾತ್ರ ಬಯಸುವುದು.

ಅಯ್ಯೋ, ಓ ಭಾವುಕ ಕಪಟಿಗಳೇ, ಓ ಆಸೆಭುರುಕರೇ! ನಿಮ್ಮ ಆಸೆಯಲ್ಲಿ ಮುಗ್ದತೆಯೇ ಇಲ್ಲ. ಮತ್ತು ಅದಕ್ಕಾಗಿಯೇ ನೀವು ಆಸೆಯನ್ನೇ ನಿಂಧಿಸುತ್ತೀರಿ.

ನಿಜವಾಗಿ, ನೀವು ಭೂಮಿಯನ್ನು ಸೃಷ್ಟಿಕರ್ತರಾಗಿ, ಜನ್ಮದಾತರಾಗಿ ಅಥವಾ ಸಂತೋಷದಿಂದ ಆಚರಿಸುವವರಾಗಿ ಪ್ರೀತಿಸುವುದಿಲ್ಲ.

ಮುಗ್ದತೆ ಎಲ್ಲಿದೆ? ಹೊಸದನ್ನು ಸೃಷ್ಟಿಸುವ ಮತ್ತು ಜೀವವನ್ನು ಹುಟ್ಟಿಸುವ ಇಚ್ಛೆ ಎಲ್ಲಿರುವುದೋ ಅಲ್ಲಿದೆ. ಮತ್ತು ತನ್ನನ್ನೇ ಮೀರಿ ಏನನ್ನಾದರೂ ಸೃಷ್ಟಿಸಲು ಪ್ರಯತ್ನಿಸುವವನಲ್ಲೇ ನನಗೆ ಅತ್ಯಂತ ಪವಿತ್ರ ಇಚ್ಛೆ ಕಾಣುತ್ತದೆ.

ಸೌಂದರ್ಯ ಎಲ್ಲಿದೆ? ನಾನು ನನ್ನ ಸಂಪೂರ್ಣ ಅಸ್ತಿತ್ವದಿಂದ ಬಯಸಬೇಕಾದ ಸ್ಥಳದಲ್ಲಿದೆ; ಕೇವಲ ಒಂದು ಬಿಂಬವು ಕೇವಲ ಬಿಂಬವಾಗಿ ಉಳಿಯಬಾರದೆಂದು, ನಾನು ಎಲ್ಲೆಲ್ಲಿ ಪ್ರೀತಿಸಲು ಮತ್ತು ನಾಶವಾಗಲು ಸಿದ್ಧನಾಗುತ್ತೇನೋ ಅಲ್ಲಿದೆ.

ಪ್ರೀತಿಸುವುದು ಮತ್ತು ನಾಶವಾಗುವುದು ಅನಾದಿಕಾಲದಿಂದ ಜೊತೆಯಾಗಿ ಬಂದಿವೆ. ಪ್ರೀತಿಸುವ ಇಚ್ಛೆ ಎಂದರೆ ಸಾವಿಗೂ ಸಿದ್ಧವಾಗಿರುವುದು. ಹೀಗೆ ನಾನು ನಿಮಗೆ ಹೇಳುತ್ತೇನೆ, ಓ ಹೇಡಿಗಳೇ.

ಆದರೆ ಈಗ ನಿಮ್ಮ ಶಕ್ತಿಹೀನವಾದ ಕಣ್ಣು ಕೇವಲ ನೋಡುವುದನ್ನೇ “ಧ್ಯಾನ” ಎಂದು ಕರೆದುಕೊಳ್ಳುತ್ತದೆ. ಮತ್ತು ಭಯಭೀತ ಕಣ್ಣುಗಳಿಂದ ಪರಿಶೀಲಿಸಬಹುದಾದ ಯಾವುದನ್ನಾದರೂ “ಸುಂದರ” ಎಂದು ಹೆಸರಿಸಲಾಗುತ್ತದೆ. ಅಯ್ಯೋ, ನೀವು ಉನ್ನತ ಪದಗಳನ್ನು ಹೇಗೆ ಅವಮಾನಗೊಳಿಸುತ್ತೀರಿ!

ಆದರೆ ಇದೇ ನಿಮ್ಮ ಪಾಲಿನ ಶಾಪವಾಗಲಿದೆ, ಓ ನಿರ್ಮಲರೆಂದು ಕರೆಸಿಕೊಳ್ಳುವವರೇ, ಓ ಶುದ್ಧ ಗ್ರಹಿಸುವವರೇ: ನೀವು ದಿಗಂತದ ಅಂಚಿನಲ್ಲಿ ತುಂಬಿಕೊಂಡು ಹರಡಿಕೊಂಡಿದ್ದರೂ, ಎಂದಿಗೂ ಏನನ್ನೂ ಸೃಷ್ಟಿಸಲಾರಿರಿ, ಜನ್ಮ ನೀಡಲಾರಿರಿ!

ನಿಜವಾಗಿಯೂ, ನಿಮ್ಮ ಬಾಯಿಗಳು ಉದಾತ್ತ ಪದಗಳಿಂದ ತುಂಬಿವೆ; ಮತ್ತು ನಿಮ್ಮ ಹೃದಯಗಳು ಮಹತ್ತರ ಚೇತನದಿಂದ ಉಕ್ಕಿ ಹರಿಯುತ್ತಿವೆ ಎಂದು ನಾವು ನಂಬಬೇಕು ಎಂದು ನೀವು ಬಯಸುತ್ತೀರಾ, ಓ ವಂಚಕರೇ?

ಆದರೆ ನನ್ನ ಮಾತುಗಳು ಬಡವಾಗಿವೆ, ಅಸಮರ್ಪಕವಾಗಿವೆ, ತಡವರಿಸುತ್ತಿವೆ. ನಿಮ್ಮ ಔತಣದ ಮೇಜಿನಿಂದ ಕೆಳಗೆ ಬೀಳುವುದನ್ನೇ ನಾನು ಸಂತೋಷದಿಂದ ಆರಿಸಿಕೊಳ್ಳುತ್ತೇನೆ.

ಆದರೂ ಆ ತುಣುಕುಗಳ ಸಹಾಯದಿಂದಲೂ ನಾನು ಕಪಟಿಗಳಿಗೆ ಸತ್ಯವನ್ನು ಹೇಳಬಲ್ಲೆ. ಹೌದು, ನನ್ನ ಮೀನಿನ ಮೂಳೆಗಳು, ಚಿಪ್ಪುಗಳು ಮತ್ತು ಮುಳ್ಳಿನ ಎಲೆಗಳು ವಂಚಕರ ಮೂಗನ್ನು ಕೆರಳಿಸಲಿವೆ.

ನಿಮ್ಮ ಸುತ್ತಲೂ ಮತ್ತು ನಿಮ್ಮ ಔತಣಗಳ ಸುತ್ತಲೂ ಯಾವಾಗಲೂ ಕೆಟ್ಟ ಗಾಳಿ ಇದೆ. ನಿಮ್ಮ ಕಾಮುಕ ಆಲೋಚನೆಗಳು, ನಿಮ್ಮ ಸುಳ್ಳುಗಳು ಮತ್ತು ನಿಮ್ಮ ರಹಸ್ಯಗಳು ಆ ವಾತಾವರಣವನ್ನು ತುಂಬಿವೆ.

ನಿಮ್ಮ ಮೇಲೆ ನಂಬಿಕೆ ಇಡಲು ಧೈರ್ಯಮಾಡಿ—ನಿಮ್ಮ ಮೇಲೂ ನಿಮ್ಮ ಅಂತರಂಗದ ಮೇಲೂ! ತನ್ನ ಮೇಲೆ ನಂಬಿಕೆ ಇಲ್ಲದವನು ಯಾವಾಗಲೂ ಸುಳ್ಳು ಹೇಳುತ್ತಾನೆ.

ಓ "ಪವಿತ್ರರು" ಎಂದು ಕರೆದುಕೊಳ್ಳುವವರೇ, ನೀವು ನಿಮ್ಮ ಮುಂದೆ ದೇವರ ಮುಖವಾಡವನ್ನು ನೇತುಹಾಕಿಕೊಂಡಿದ್ದೀರಿ: ಆ ದೇವರ ಮುಖವಾಡದೊಳಗೆ ನಿಮ್ಮ ಅಸಹ್ಯಕರವಾದ ಸುರುಳಿ ಸುತ್ತಿದ್ದ ಹಾವು ತೆವಳಿಕೊಂಡು ಹೋಗಿದೆ.

ನಿಜವಾಗಿ, ಓ ಧ್ಯಾನಿಗಳೆಂದು ಕರೆಸಿಕೊಳ್ಳುವವರೇ, ನೀವು ಮೋಸಗೊಳಿಸುತ್ತೀರಿ! ಜರಥುಷ್ಟ್ರನೂ ಒಮ್ಮೆ ನಿಮ್ಮ ದೈವಿಕ ಹೊರರೂಪದಿಂದ ಮೋಸಹೋಗಿದ್ದನು. ಅದರೊಳಗೆ ಅಡಗಿದ್ದ ಹಾವನ್ನು ಅವನು ಗುರುತಿಸಲಿಲ್ಲ.

ಒಮ್ಮೆ ನಿಮ್ಮ ಆಟಗಳೊಳಗೆ ದೇವರ ಆತ್ಮವೇ ಆಟವಾಡುತ್ತಿರುವುದನ್ನು ನಾನು ನೋಡಿದ್ದೇನೆ ಎಂದು ಭಾವಿಸಿದ್ದೆ. ನಿಮ್ಮ ಕಲೆಗಿಂತ ಶ್ರೇಷ್ಠವಾದ ಕಲೆಯನ್ನು ನಾನು ಆಗ ಕನಸಿನಲ್ಲಿಯೂ ಕಂಡಿರಲಿಲ್ಲ.

ಹಾವುಗಳ ಕೊಳಕು ಮತ್ತು ದುರ್ವಾಸನೆ ನನ್ನಿಂದ ಮರೆಮಾಡಲ್ಪಟ್ಟಿತ್ತು. ಅಲ್ಲೊಂದು ಹಲ್ಲಿಯ ಕುತಂತ್ರಭರಿತ ಕಾಮನೆ ಅಲೆದಾಡುತ್ತಿರುವುದನ್ನು ನಾನು ನೋಡಿರಲಿಲ್ಲ.

ಆದರೆ ನಾನು ನಿಮ್ಮ ಹತ್ತಿರ ಬಂದೆ. ಆಗ ಹಗಲು ನನ್ನ ಬಳಿಗೆ ಬಂತು—ಈಗ ಅದು ನಿಮ್ಮ ಬಳಿಗೂ ಬಂದಿದೆ. ಚಂದ್ರನ ಪ್ರೇಮಪ್ರಕರಣ ಈಗ ಮುಗಿದಿದೆ.

ಅಲ್ಲಿ ನೋಡಿ! ಆ ಗುಲಾಬಿ ಬಣ್ಣದ ಮುಂಜಾವಿನ ಮುಂದೆ—ಅದು ಆಶ್ಚರ್ಯಚಕಿತವಾಗಿ ಮತ್ತು ಮುಸುಕಾಗಿ ನಿಂತಿದೆ!

ಏಕೆಂದರೆ ಈಗಾಗಲೇ ಅವಳು ಬರುತ್ತಿದ್ದಾಳೆ, ಆ ಪ್ರಖರವಾದವಳು,—ಭೂಮಿಯ ಮೇಲಿನ ಅವಳ ಪ್ರೀತಿ ಬರುತ್ತಿದೆ!

ಮುಗ್ದತೆ ಮತ್ತು ಸೃಷ್ಟಿಸುವ ಆಸೆ—ಇದೇ ಸೂರ್ಯನ ಪ್ರೀತಿಯ ಸಾರ.

ಅಲ್ಲಿ ನೋಡಿ, ಅವಳು ಸಮುದ್ರದ ಮೇಲೆ ಎಷ್ಟು ಚಡಪಡಿಕೆಯಿಂದ ಬರುತ್ತಿದ್ದಾಳೆ! ಅವಳ ಪ್ರೀತಿಯ ದಾಹ ಮತ್ತು ಬಿಸಿಯುಸಿರನ್ನು ನೀವು ಅನುಭವಿಸುತ್ತಿಲ್ಲವೇ?

ಅವಳು ಸಮುದ್ರದಿಂದ ಕುಡಿಯಲು ಮತ್ತು ಅದರ ಆಳಗಳನ್ನು ತನ್ನ ಎತ್ತರದವರೆಗೆ ಎತ್ತಿಕೊಳ್ಳಲು ಬಯಸುತ್ತಾಳೆ. ಈಗ ಸಮುದ್ರದ ಆಸೆಯು ಅದರ ಸಾವಿರ ಸ್ತನಗಳೊಂದಿಗೆ ಮೇಲಕ್ಕೆ ಏರುತ್ತಿದೆ.

ಸಮುದ್ರವು ಸೂರ್ಯನ ದಾಹದಿಂದ ಮುದ್ದಾಡಿಸಿಕೊಳ್ಳಲು ಮತ್ತು ಮೇಲಕ್ಕೆ ಸೆಳೆಯಲ್ಪಡಲು ಹಂಬಲಿಸುತ್ತದೆ. ಅದು ಆವಿಯಾಗಲು, ಎತ್ತರವಾಗಲು, ಬೆಳಕಿನ ಮಾರ್ಗವಾಗಲು ಮತ್ತು ಸ್ವತಃ ಬೆಳಕಾಗಲು ಬಯಸುತ್ತದೆ.

ನಿಜವಾಗಿ, ಸೂರ್ಯನಂತೆ ನಾನು ಜೀವನವನ್ನು ಮತ್ತು ಎಲ್ಲಾ ಆಳವಾದ ಸಮುದ್ರಗಳನ್ನು ಪ್ರೀತಿಸುತ್ತೇನೆ.

ಮತ್ತು ನನಗೆ ಜ್ಞಾನ ಎಂದರೆ ಇದೇ: ಆಳವಾಗಿರುವ ಎಲ್ಲವೂ ಮೇಲಕ್ಕೆ ಏರಬೇಕು—ನನ್ನ ಎತ್ತರದವರೆಗೆ!

ಹೀಗೆ ಮಾತನಾಡಿದನು ಜರಥುಷ್ಟ್ರ.

0 ಕಾಮೆಂಟ್‌(ಗಳು):

ಕಾಮೆಂಟ್‌‌ ಪೋಸ್ಟ್‌ ಮಾಡಿ

 
ಜರಥುಷ್ಟ್ರನ ಉಪದೇಶಗಳು. Design by Pocket - Fixed by Blogger templates