ಓ ಪ್ರಸಿದ್ಧ ಜ್ಞಾನಿಗಳೇ!—ಸತ್ಯದ ಬದಲಿಗೆ ನೀವು ಜನರ ಮೂಢನಂಬಿಕೆಗಳಿಗೆ ಸೇವೆ ಸಲ್ಲಿಸಿದ್ದೀರಿ! ಹಾಗೂ ಇದೇ ಕಾರಣಕ್ಕಾಗಿ, ಜನರು ನಿಮ್ಮನ್ನು ಗೌರವಿಸಿದರು.
ಮತ್ತು ಇದೇ ಕಾರಣದಿಂದ ಅವರು ನಿಮ್ಮ ಅವಿಶ್ವಾಸವನ್ನೂ ಸಹಿಸಿಕೊಂಡರು, ಏಕೆಂದರೆ ಅದು ಜನರಿಗೆ ಒಂದು ವಿನೋದವೂ, ಒಂದು ಬಳಸು ದಾರಿಯೂ ಆಗಿತ್ತು. ಹೀಗೆ ಧಣಿಯು ತನ್ನ ಗುಲಾಮರಿಗೆ ಮಿತಿಯಾದ ಸ್ವಾತಂತ್ರ್ಯ ನೀಡಿ ಅವರ ಅಹಂಕಾರವನ್ನು ನೋಡಿ ಆನಂದಿಸುತ್ತಾನೆ.
ಆದರೆ ಜನರಿಂದ ದ್ವೇಷಿಸಲ್ಪಡುವವನು— ನಾಯಿಗಳು ತೋಳವನ್ನು ದ್ವೇಷಿಸುವಂತೆ—ಅವನೇ ಸ್ವತಂತ್ರ ಆತ್ಮನು; ಬಂಧನಗಳ ಶತ್ರು, ಆರಾಧನೆ ಮಾಡದವನು, ಕಾಡಿನ ನಿವಾಸಿ.
ಅವನನ್ನು ಅವನ ಗುಹೆಯಿಂದ ಹೊರಗೆಳೆದು ಬೇಟೆಯಾಡುವುದನ್ನೇ ಜನರು ಸದಾ “ನ್ಯಾಯಬುದ್ಧಿ” ಎಂದು ಕರೆಯುತ್ತಾರೆ: ಅವನ ವಿರುದ್ಧ ಜನರು ಯಾವಾಗಲೂ ತಮ್ಮ ಹರಿತವಾದ ಹಲ್ಲುಗಳ ನಾಯಿಗಳನ್ನು ಛೂ ಬಿಡುತ್ತಾರೆ.
"ಏಕೆಂದರೆ ಜನರಿದ್ದ ಕಡೆಯೇ ಸತ್ಯವಿರುತ್ತದೆ! ಅಯ್ಯೋ, ಹುಡುಕುವವರಿಗೆ ಸಂಕಟ ತಪ್ಪಿದ್ದಲ್ಲ!"—ಪ್ರಾಚೀನ ಕಾಲದಿಂದಲೂ ಹೀಗೆಯೇ ಪ್ರತಿಧ್ವನಿಸುತ್ತಿದೆ.
ನೀವು ಜನರ ಆರಾಧನೆಯನ್ನು ಸಮರ್ಥಿಸಬೇಕೆಂದಿದ್ದಿರಿ: ಅದನ್ನೇ ನೀವು “ಸತ್ಯದ ಇಚ್ಛೆ” ಎಂದು ಕರೆಯುತ್ತಿದ್ದಿರಿ, ಓ ಪ್ರಸಿದ್ಧ ಜ್ಞಾನಿಗಳೇ!
ಮತ್ತು ನಿಮ್ಮ ಹೃದಯ ಸದಾ ತನ್ನೊಳಗೆ ಹೀಗೆ ಹೇಳಿಕೊಂಡಿತು: “ನಾನು ಜನರಿಂದ ಬಂದಿದ್ದೇನೆ; ದೇವವಾಣಿಯೂ ನನಗೆ ಅಲ್ಲಿಂದಲೇ ಬಂದಿದೆ.”
ಜನರ ಪರ ವಾದಿಸುವವರಾಗಿ —ನೀವು ಕತ್ತೆಯಂತೆ ಹಠಮಾರಿಗಳೂ ಕುತಂತ್ರಿಗಳೂ ಆಗಿದ್ದೀರಿ.
ಮತ್ತು ಜನರೊಂದಿಗೆ ಸುಲಭವಾಗಿ ಹೊಂದಿಕೊಂಡು ಸಾಗಲು ಬಯಸುವ ಅನೇಕ ಪ್ರಭಾವಿ ವ್ಯಕ್ತಿಗಳು ತಮ್ಮ ಕುದುರೆಗಳ ಮುಂದೆ—ಒಂದು ಸಣ್ಣ ಕತ್ತೆಯನ್ನು, ಅಂದರೆ ಒಬ್ಬ ಪ್ರಸಿದ್ಧ ಜ್ಞಾನಿಯನ್ನು ಕಟ್ಟಿದರು.
ಮತ್ತು ಈಗ ಪ್ರಸಿದ್ಧ ಜ್ಞಾನಿಗಳೇ, ನೀವು ಅಂತಿಮವಾಗಿ ಸಿಂಹದ ಚರ್ಮವನ್ನು ನಿಮ್ಮ ಮೇಲಿನಿಂದ ಸಂಪೂರ್ಣವಾಗಿ ಕಿತ್ತು ಬಿಸಾಡಬೇಕೆಂದು ನಾನು ಬಯಸುತ್ತೇನೆ!
ಆ ಮೃಗದ ಚರ್ಮವನ್ನು, ಚುಕ್ಕೆಗಳಿರುವ ಚರ್ಮವನ್ನು, ಮತ್ತು ಅನ್ವೇಷಕನ, ಹುಡುಕುವವನ, ಜಯಿಸುವವನ ಚದುರಿದ ಕೂದಲನ್ನು ಕಿತ್ತೆಸೆಯಿರಿ!
ಅಯ್ಯೋ, ನಾನು ನಿಮ್ಮ "ಸತ್ಯಸಂಧತೆ"ಯನ್ನು ನಂಬಬೇಕಾದರೆ, ನೀವು ಮೊದಲು ನಿಮ್ಮ ಆರಾಧಿಸುವ ಇಚ್ಛೆಯನ್ನು ಮುರಿದುಹಾಕಬೇಕು.
ಸತ್ಯಸಂಧ—ಎಂದು ನಾನು ಯಾರನ್ನು ಕರೆಯುತ್ತೇನೆಂದರೆ, ಯಾರು ದೇವರಿಲ್ಲದ ಮರುಭೂಮಿಗಳಿಗೆ ಹೋಗುತ್ತಾರೋ ಮತ್ತು ಯಾರು ತಮ್ಮ ಆರಾಧಿಸುವ ಹೃದಯವನ್ನು ಮುರಿದುಹಾಕಿದ್ದಾರೋ ಅವರನ್ನು.
ಹಳದಿ ಮರಳಿನಲ್ಲಿ ಮತ್ತು ಸೂರ್ಯನ ಶಾಖದಿಂದ ಸುಟ್ಟು ಕರಕಲಾದ ಅವನು, ನಿಸ್ಸಂದೇಹವಾಗಿ ನೆರಳಿನ ಮರಗಳಡಿ ಜೀವ ವಿಶ್ರಾಂತಿ ಪಡೆಯುವ, ನೀರಿನ ಮೂಲಗಳಿಂದ ಸಮೃದ್ಧವಾದ ದ್ವೀಪಗಳನ್ನು ದಾಹದಿಂದ ನೋಡುವನು.
ಆದರೆ ಅವನ ದಾಹವು ಅವನನ್ನು ಆ ಸುಖ ಹೊಂದಲು ಒತ್ತಾಯಿಸುವುದಿಲ್ಲ: ಏಕೆಂದರೆ ಎಲ್ಲೆಲ್ಲಿ ಒಯಾಸಿಸ್ಗಳಿವೆಯೋ, ಅಲ್ಲಿ ವಿಗ್ರಹಗಳೂ ಇವೆ.
ಹಸಿದ, ಕ್ರೂರ, ಏಕಾಂಗಿ, ದೇವರಿಲ್ಲದ—ಹೀಗೆ ಸಿಂಹಸ್ವಭಾವದ ಇಚ್ಛೆ ತನ್ನನ್ನೇ ಬಯಸುತ್ತದೆ.
ಗುಲಾಮರ ಸುಖದಿಂದ ಮುಕ್ತನಾದ, ದೇವರು ಮತ್ತು ಆರಾಧನೆಗಳಿಂದ ಮುಕ್ತನಾದ, ಭಯವಿಲ್ಲದ ಮತ್ತು ಭಯಾನಕನಾದ, ಶ್ರೇಷ್ಠ ಮತ್ತು ಏಕಾಂಗಿ: ಸತ್ಯಸಂಧನ ಇಚ್ಛೆಯು ಹೀಗಿರುತ್ತದೆ.
ಮರುಭೂಮಿಯ ಯಜಮಾನರಂತೆ ಸತ್ಯಸಂಧರು ಮತ್ತು ಮುಕ್ತ ಆತ್ಮಗಳು ಮೊದಲಿನಿಂದಲೂ ಮರುಭೂಮಿಯಲ್ಲೇ ವಾಸಿಸುತ್ತಿದ್ದರು; ಆದರೆ ನಗರಗಳಲ್ಲಿ ಹೊಟ್ಟೆ ತುಂಬಿದ ಪ್ರಸಿದ್ಧ ಜ್ಞಾನಿಗಳು ಭಾರ ಎಳೆಯುವ ಪ್ರಾಣಿಗಳಂತೆ—ವಾಸಿಸುತ್ತಾರೆ.
ಏಕೆಂದರೆ ಅವರು ಯಾವಾಗಲೂ ಕತ್ತೆಗಳಂತೆ—ಜನರ ಬಂಡಿಯನ್ನು ಎಳೆಯುತ್ತಾರೆ!
ಈ ಕಾರಣಕ್ಕಾಗಿ ನಾನು ಅವರನ್ನು ದೂಷಿಸುವುದಿಲ್ಲ: ಆದರೆ ಅವರು ನನಗೆ ಯಾವಾಗಲೂ ಸೇವಕರಾಗಿ ಮತ್ತು ನೊಗಕ್ಕೆ ಕಟ್ವಟಿದವರಾಗಿಯೇ ಉಳಿಯುತ್ತಾರೆ, ಅವರು ಚಿನ್ನದ ಅಲಂಕಾರಗಳಲ್ಲಿ ಮಿನುಗಿದರೂ ಸಹ.
ಮತ್ತು ಅನೇಕ ಬಾರಿ ಅವರು ಒಳ್ಳೆಯ ಸೇವಕರಾಗಿದ್ದರು ಮತ್ತು ತಮ್ಮ ಕೂಲಿಗೆ ಯೋಗ್ಯರಾಗಿದ್ದರು. ಏಕೆಂದರೆ ಸದ್ಗುಣ ಹೀಗೆ ಹೇಳುತ್ತದೆ: “ನೀನು ಸೇವಕನಾಗಲೇಬೇಕಾದರೆ, ನಿನ್ನ ಸೇವೆ ಅತ್ಯಂತ ಉಪಯುಕ್ತವಾಗುವವನನ್ನು ಹುಡುಕು!
ನಿನ್ನ ಯಜಮಾನನ ಆತ್ಮವೂ ಸದ್ಗುಣವೂ, ನೀನು ಅವನ ಸೇವಕನಾಗಿರುವುದರಿಂದ ಬೆಳೆಯಲಿ: ಹೀಗೆ ನೀನೂ ಅವನ ಆತ್ಮ ಮತ್ತು ಸದ್ಗುಣದೊಂದಿಗೆ ಬೆಳೆಯಲಿ!”
ಮತ್ತು ನಿಜವಾಗಿಯೂ, ಓ ಪ್ರಸಿದ್ಧ ಜ್ಞಾನಿಗಳೇ, ಜನರ ಸೇವಕರೇ! ಜನರ ಆತ್ಮ ಮತ್ತು ಸದ್ಗುಣದೊಂದಿಗೆ ನೀವೂ ಬೆಳೆದಿದ್ದೀರಿ—ಮತ್ತು ನಿಮ್ಮ ಮೂಲಕ ಜನರೂ ಬೆಳೆದಿದ್ದಾರೆ! ನಿಮ್ಮ ಗೌರವಾರ್ಥವಾಗಿ ನಾನು ಇದನ್ನು ಹೇಳುತ್ತಿದ್ದೇನೆ!
ಆದರೆ ನಿಮ್ಮ ಸದ್ಗುಣಗಳಿದ್ದರೂ ಸಹ, ನೀವು ನನಗೆ ಜನರೇ—ಕುರುಡಾದ ಕಣ್ಣುಗಳ ಜನರು—ಆತ್ಮವೆಂದರೇನು ಎಂಬುದನ್ನು ತಿಳಿಯದ ಜನರು!
ಆತ್ಮ ಎನ್ನುವುದು ಜೀವನವನ್ನು ತಾನೇ ಕತ್ತರಿಸುವ ಜೀವನ: ತನ್ನದೇ ಯಾತನೆಯ ಮೂಲಕ ಅದು ತನ್ನ ಜ್ಞಾನವನ್ನು ಹೆಚ್ಚಿಸುತ್ತದೆ,—ಇದನ್ನು ಮೊದಲು ನೀವು ತಿಳಿದಿರುವಿರಾ?
ಮತ್ತು ಆತ್ಮದ ಸಂತೋಷವೇನೆಂದರೆ: ಕಣ್ಣೀರುಗಳಿಂದ ಅಭಿಷೇಕಗೊಂಡು ಹರಕೆಯ ಕುರಿಯಾಗುವದು,—ಇದನ್ನು ಮೊದಲು ನೀವು ತಿಳಿದಿರುವಿರಾ?
ಮತ್ತು ಕುರುಡನ ಕುರುಡತನ, ಅವನ ಹುಡುಕಾಟ ಮತ್ತು ತಡಕಾಟ, ಅವನು ನೋಡಿದ ಸೂರ್ಯನ ಶಕ್ತಿಗೆ ಇನ್ನೂ ಸಾಕ್ಷಿಯಾಗುತ್ತದೆ,—ಇದನ್ನು ಮೊದಲು ನೀವು ತಿಳಿದಿರುವಿರಾ?
ಮತ್ತು ಜ್ಞಾನದ ಅನ್ವೇಷಕನು ಪರ್ವತಗಳ ಸಹಾಯದಿಂದ ಕಟ್ಟುವುದನ್ನು ಕಲಿಯಬೇಕು! ಆತ್ಮಕ್ಕೆ ಪರ್ವತಗಳನ್ನು ಸ್ಥಳಾಂತರಿಸುವುದು ದೊಡ್ಡ ವಿಷಯವಲ್ಲ,—ಇದನ್ನು ಮೊದಲು ನೀವು ತಿಳಿದಿರುವಿರಾ?
ನೀವು ಕೇವಲ ಆತ್ಮದ ಕಿಡಿಗಳನ್ನು ಮಾತ್ರ ಬಲ್ಲಿರಿ: ಆದರೆ ಅದು ಎಷ್ಟು ಗಟ್ಟಿಯಾದ ಅಡಿಗಲ್ಲು ಎಂಬುದನ್ನು ಮತ್ತು ಅದರ ಸುತ್ತಿಗೆಯ ಕ್ರೌರ್ಯವನ್ನು ನೀವು ನೋಡುವುದಿಲ್ಲ!
ನಿಜವಾಗಿಯೂ, ನಿಮಗೆ ಆತ್ಮದ ಗರ್ವದ ಬಗ್ಗೆ ತಿಳಿದಿಲ್ಲ! ಆದರೆ ಒಂದು ವೇಳೆ ಆತ್ಮವು ತನ್ನ ವಿನಯದ ಬಗ್ಗೆ ಮಾತನಾಡಲು ಬಯಸಿದರೆ, ಅದನ್ನು ಸಹಿಸಿಕೊಳ್ಳುವ ಶಕ್ತಿಯೂ ನಿಮಗಿಲ್ಲ!
ಮತ್ತು ನೀವು ಎಂದಿಗೂ ನಿಮ್ಮ ಆತ್ಮವನ್ನು ಹಿಮದ ಗುಂಡಿಯೊಳಗೆ ಎಸೆಯಲು ಸಾಧ್ಯವಾಗಿಲ್ಲ: ಅದಕ್ಕೆ ಬೇಕಾದಷ್ಟು ಉಷ್ಣತೆ ನಿಮ್ಮಲ್ಲಿಲ್ಲ! ಹೀಗೆ ನೀವು ಅದರ ತಂಪಿನ ಪರಮಾನಂದವನ್ನೂ ಬಲ್ಲವರಲ್ಲ.
ಆದರೆ ಪ್ರತಿಯೊಂದು ವಿಷಯದಲ್ಲೂ ನೀವು ಆತ್ಮದೊಂದಿಗೆ ಅತಿಯಾದ ಆಪ್ತತೆಯನ್ನು ತೋರಿಸುತ್ತೀರಿ; ಮತ್ತು ಜ್ಞಾನದ ಹೆಸರಿನಲ್ಲಿ ನೀವು ಕೆಟ್ಟ ಕವಿಗಳಿಗಾಗಿ ಒಂದು ಧರ್ಮಶಾಲೆ ಮತ್ತು ಆಸ್ಪತ್ರೆಯನ್ನು ನಿರ್ಮಿಸಿದ್ದೀರಿ.
ನೀವು ಹದ್ದುಗಳಲ್ಲ: ಆದ್ದರಿಂದ ಆತ್ಮದ ಭಯಾನಕತೆಯಲ್ಲಿರುವ ಸುಖವನ್ನು ನೀವು ಅನುಭವಿಸಲಿಲ್ಲ. ಮತ್ತು ಪಕ್ಷಿಯಲ್ಲದವನು ಪ್ರಪಾತಗಳ ಮೇಲೆ ಬೀಡುಬಿಡಬಾರದು.
ನನಗೆ ನೀವು ಉಗುರುಬೆಚ್ಚಗಿನವರಂತೆ ಕಾಣುತ್ತೀರಿ: ಆದರೆ ಪ್ರತಿಯೊಂದು ಆಳವಾದ ಜ್ಞಾನವು ತಂಪಾಗಿ ಹರಿಯುತ್ತದೆ. ಆತ್ಮದ ಅತ್ಯಂತ ಒಳಗಿನ ಬಾವಿಗಳು ಮಂಜಿನಂತೆ ತಂಪಾಗಿರುತ್ತವೆ: ಕೆಲಸ ಮಾಡುವವರಿಗೆ ಮತ್ತು ಬಿಸಿ ಕೈಗಳಿಗೆ ಅದೊಂದು ಚೈತನ್ಯ.
ಗೌರವನೀಯರಾಗಿ ನೀವು ಅಲ್ಲಿ ನಿಂತಿದ್ದೀರಿ, ಗಟ್ಟಿಯಾಗಿ, ನೇರ ಬೆನ್ನಿನಿಂದ, ಓ ಪ್ರಸಿದ್ಧ ಜ್ಞಾನಿಗಳೇ!—ಯಾವ ಬಲವಾದ ಗಾಳಿಯೂ ಅಥವಾ ಇಚ್ಛೆಯೂ ನಿಮ್ಮನ್ನು ಚಲಿಸುವುದಿಲ್ಲ.
ಸಮುದ್ರದ ಮೇಲೆ ಸಾಗುವ ಹಾಯಿದೋಣಿಯನ್ನು ನೀವು ಎಂದೂ ನೋಡಿಲ್ಲವೇ? ಅದು ಗಾಳಿಯ ವೇಗಕ್ಕೆ ಉಬ್ಬಿ, ಕಂಪಿಸುತ್ತಾ ಸಾಗುತ್ತದಲ್ಲವೇ?
ಆ ಹಾಯಿದೋಣಿಯಂತೆ, ಆತ್ಮದ ಬಲದಿಂದ ನನ್ನ ಜ್ಞಾನವು ಸಮುದ್ರದ ಮೇಲೆ ಸಾಗುತ್ತಿದೆ—ನನ್ನ ಕಾಡು ಜ್ಞಾನ!
ಆದರೆ ಜನರ ಸೇವಕರಾದ ನೀವು, ಓ ಪ್ರಸಿದ್ಧ ಜ್ಞಾನಿಗಳೇ—ನೀವು ನನ್ನೊಂದಿಗೆ ಹೇಗೆ ಬರಬಲ್ಲಿರಿ!
ಜರತುಷ್ಟ್ರನು ಹೀಗೆ ಹೇಳಿದನು.
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ