ಸೋಮವಾರ, ಏಪ್ರಿಲ್ 6, 2026

ಪ್ರಸ್ತಾವನೆ - 6

ಸೋಮವಾರ, ಏಪ್ರಿಲ್ 6, 2026
ಆದರೆ, ಆಗ ಪ್ರತಿಯೊಬ್ಬರೂ ಸುಮ್ಮನಾಗುವಂತೆ ಮತ್ತು ಎಲ್ಲರೂ ದಿಟ್ಟಿಸಿ ನೋಡುವಂತೆ ಒಂದು ಘಟನೆ ನಡೆಯಿತು. ಈ ಮಧ್ಯೆ, ಹಗ್ಗದ ಮೇಲೆ ನಡೆಯುವ ಕಲಾವಿದನು ತನ್ನ ಆಟ ಆರಂಭಿಸಿದ್ದನು: ಅವನು ಒಂದು ಚಿಕ್ಕ ಬಾಗಿಲಿನಿಂದ ಹೊರಬಂದು, ಮಾರುಕಟ್ಟೆ ಮತ್ತು ಜನರ ಮೇಲೆ ಚಾಚಿದ್ದ ಎರಡು ಗೋಪುರಗಳ ನಡುವೆ ಕಟ್ಟಿದ್ದ ಹಗ್ಗದ ಮೇಲೆ ನಡೆಯುತ್ತಿದ್ದನು.

ಅವನು ಹಗ್ಗದ ಮದ್ಯಬಾಗಕ್ಕೆ ಬಂದಾಗ, ಆ ಚಿಕ್ಕ ಬಾಗಿಲು ಮತ್ತೆ ತೆರೆಯಿತು. ಬಣ್ಣಬಣ್ಣದ ವೇಷ ತೊಟ್ಟ ಒಬ್ಬ ಕೋಡಂಗಿ ಹೊರಬಂದು, ಮೊದಲನೆಯವನ ಹಿಂದೆ ವೇಗವಾಗಿ ಓಡಿ ಬಂದನು.

"ನಡಿ, ಎಲೈ ಮಂದಗತಿಯವನೇ!" ಎಂದು ಅವನು ಭಯಾನಕ ಧ್ವನಿಯಲ್ಲಿ ಕೂಗಿದನು, "ಬೇಗ ನಡಿ ಸೋಮಾರಿಯೇ, ಹೊರಗಿನವನೇ! ಇಲ್ಲದಿದ್ದರೆ ನನ್ನ ಕಾಲಿನಿಂದ ನಿನ್ನನ್ನು ತುಳಿಯುತ್ತೇನೆ! ಈ ಗೋಪುರಗಳ ನಡುವೆ ನೀನೇನು ಮಾಡುತ್ತಿದ್ದೀಯೆ? ನಿನ್ನ ಜಾಗ ಗೋಪುರದ ಒಳಗೆ ಮಾತ್ರ, ನಿನ್ನನ್ನು ಅಲ್ಲಿ ಬಂಧಿಸಬೇಕು; ನಿನಗಿಂತ ಉತ್ತಮವಾದವನ ದಾರಿಯಲ್ಲಿ ನೀನು ಅಡ್ಡ ನಿಂತಿರುವೆಯ!"

ಪ್ರತಿ ಮಾತಿನ ಜೊತೆಗೆ ಅವನು ಮೊದಲನೆಯವನಿಗೆ ಹತ್ತಿರ ಹತ್ತಿರ ಬಂದನು. ಆದರೆ ಅವನು ಕೇವಲ ಒಂದು ಹೆಜ್ಜೆ ಹಿಂದಿದ್ದಾಗ, ಪ್ರತಿಯೊಬ್ಬರೂ ಸ್ತಬ್ಧರಾಗುವಂತೆ ಒಂದು ಭಯಾನಕ ಘಟನೆ ನಡೆಯಿತು—ಅವನು ರಾಕ್ಷಸನಂತೆ ಕಿರುಚುತ್ತಾ, ತನ್ನ ಮುಂದೆ ಇದ್ದವನ ಮೇಲೆ ಜಿಗಿದು ಹೋದನು.

ಮೊದಲನೆಯವನು ತನ್ನ ಎದುರಾಳಿ ಹೀಗೆ ಗೆದ್ದದ್ದನ್ನು ಕಂಡು, ತನ್ನ ಸಮತೋಲನ ಮತ್ತು ಧೈರ್ಯವನ್ನು ಕಳೆದುಕೊಂಡನು; ಅವನು ತನ್ನ ಕೈಯಲ್ಲಿದ್ದ ಕೋಲನ್ನು ಎಸೆದು, ಅದಕ್ಕಿಂತ ವೇಗವಾಗಿ ಕೈಕಾಲುಗಳನ್ನು ಬಡಿಯುತ್ತಾ ಆಳಕ್ಕೆ ಬಿದ್ದನು.

ಇಡೀ ಮಾರುಕಟ್ಟೆಯ ಜನರು ಬಿರುಗಾಳಿ ಬಂದ ಸಮುದ್ರದಂತೆ ಗೊಂದಲಗೊಂಡರು: ಎಲ್ಲರೂ ಚದುರಿ ಓಡಿದರು— ಮುಖ್ಯವಾಗಿ ಆ ದೇಹ ಬೀಳುವ ಜಾಗದಿಂದ ದೂರ ಸರಿದರು.

ಆದರೆ ಜರತುಷ್ಟ್ರನು ಅಲ್ಲೇ ನಿಂತಿದ್ದನು, ಮತ್ತು ಆ ದೇಹವು ಅವನ ಪಕ್ಕದಲ್ಲೇ ಬಿದ್ದಿತು. ಆ ಮನುಷ್ಯನಿಗೆ ತೀವ್ರ ಪೆಟ್ಟಾಗಿ ದೇಹ ವಿರೂಪಗೊಂಡಿತ್ತು, ಆದರೆ ಅವನು ಇನ್ನೂ ಸತ್ತಿರಲಿಲ್ಲ.

ಸ್ವಲ್ಪ ಸಮಯದ ನಂತರ, ಆ ಘಾಸಿಗೊಂಡ ವ್ಯಕ್ತಿಗೆ ಪ್ರಜ್ಞೆ ಮರಳಿ ಬಂದಾಗ ಜರತುಷ್ಟ್ರನು ತನ್ನ ಪಕ್ಕದಲ್ಲಿ ಮಂಡಿಯೂರಿ ಕುಳಿತಿರುವುದನ್ನು ಕಂಡನು.

"ನೀನು ಇಲ್ಲಿ ಏನು ಮಾಡುತ್ತಿರುವೆ?" ಎಂದು ಅವನು ಕೊನೆಗೆ ಕೇಳಿದನು. "ಯಮನು ನನ್ನನ್ನು ಕೆಳಗೆ ಬೀಳುವಂತೆ ಮಾಡುತ್ತಾನೆ ಎಂದು ನನಗೆ ಮೊದಲೇ ತಿಳಿದಿತ್ತು. ಈಗ ನನ್ನನ್ನು ನರಕಕ್ಕೆ ಎಳೆದುಕೊಂಡು ಹೋಗುತ್ತಿದ್ದಾನೆ: ನೀನು ಅವನನ್ನು ತಡೆಯಬಲ್ಲೆಯಾ?"

"ನನ್ನ ಗೌರವದ ಮೇಲೆ ಆಣೆ ಮಾಡಿ ಹೇಳುತ್ತೇನೆ ಗೆಳೆಯ," ಎಂದು ಜರತುಷ್ಟ್ರನು ಉತ್ತರಿಸಿದನು, "ನೀನು ಹೇಳುತ್ತಿರುವುದು ಯಾವುದೂ ನಿಜವಲ್ಲ: ಯಾವುದೇ ಯಮನೂ ಇಲ್ಲ ಮತ್ತು ಯಾವ ನರಕವೂ ಇಲ್ಲ. ನಿನ್ನ ದೇಹಕ್ಕಿಂತ ಮೊದಲೇ ನಿನ್ನ ಆತ್ಮವು ಸತ್ತಿದೆ: ಆದ್ದರಿಂದ, ಇನ್ನು ಮುಂದೆ ಯಾವುದಕ್ಕೂ ಹೆದರಬೇಡ!"

ಆ ಮನುಷ್ಯನು ಅಪನಂಬಿಕೆಯಿಂದ ತಲೆ ಮೇಲೆತ್ತಿ ನೋಡಿದನು. "ನೀನು ಹೇಳುತ್ತಿರುವುದು ನಿಜವೇ ಆಗಿದ್ದರೆ," ಎಂದು ಅವನು ಹೇಳಿದನು, "ನನ್ನ ಜೀವ ಹೋದರೂ, ಏನನ್ನೂ ಕಳೆದುಕೊಳ್ಳುವುದಿಲ್ಲ. ಹೊಡೆತ ತಿಂದು, ಅಲ್ಪ ಆಹಾರಕ್ಕಾಗಿ ಕುಣಿಯಲು ಕಲಿತ ಪ್ರಾಣಿಗಿಂತ ನಾನು ಹೆಚ್ಚೇನೂ ಅಲ್ಲ."

"ಅದು ಹಾಗಲ್ಲ," ಎಂದು ಜರತುಷ್ಟ್ರನು ಹೇಳಿದನು, "ನೀನು ಅಪಾಯವನ್ನೇ ನಿನ್ನ ವೃತ್ತಿಯನ್ನಾಗಿಸಿಕೊಂಡಿರುವೆ; ಅದರಲ್ಲಿ ಅವಮಾನವೇನೂ ಇಲ್ಲ. ಈಗ ನೀನು ನಿನ್ನ ವೃತ್ತಿಯ ಕಾರಣಕ್ಕಾಗಿಯೇ ಸಾಯುತ್ತಿರುವೆ: ಆದ್ದರಿಂದ ನಾನು ನನ್ನ ಸ್ವಂತ ಕೈಗಳಿಂದ ನಿನ್ನ ಅಂತ್ಯಕ್ರಿಯೆ ಮಾಡುತ್ತೇನೆ."

ಜರತುಷ್ಟ್ರನು ಹೀಗೆ ಹೇಳಿದಾಗ, ಸಾಯುತ್ತಿದ್ದ ಆ ವ್ಯಕ್ತಿ ಮತ್ತೇನೂ ಮಾತನಾಡಲಿಲ್ಲ; ಆದರೆ ಅವನು ಧನ್ಯವಾದ ಹೇಳಲು ಜರತುಷ್ಟ್ರನ ಕೈಯನ್ನು ಹುಡುಕುತ್ತಿರುವಂತೆ ತನ್ನ ಕೈಯನ್ನು ಕದಡಿದನು.

0 ಕಾಮೆಂಟ್‌(ಗಳು):

ಕಾಮೆಂಟ್‌‌ ಪೋಸ್ಟ್‌ ಮಾಡಿ

 
ಜರಥುಷ್ಟ್ರನ ಉಪದೇಶಗಳು. Design by Pocket - Fixed by Blogger templates