ಸೋಮವಾರ, ಏಪ್ರಿಲ್ 6, 2026

ಪ್ರಸ್ತಾವನೆ - 5

ಸೋಮವಾರ, ಏಪ್ರಿಲ್ 6, 2026
ಜರತುಷ್ಟ್ರನು ಮಾತನಾಡಿ, ಜನರ ಕಡೆ ನೋಡಿ ಸುಮ್ಮನಾದನು. "ಇವರ ಸ್ಥಿತಿ ಹೀಗಿದೆ," ಎಂದು ಅವನು ತನ್ನ ಹೃದಯಕ್ಕೆ ಹೇಳಿಕೊಂಡನು; "ಅವರು ಅಲ್ಲಿ ನಗುತ್ತಿದ್ದಾರೆ: ಅವರಿಗೆ ನಾನು ಅರ್ಥವಾಗುತ್ತಿಲ್ಲ; ಈ ಕಿವಿಗಳ ಜೊತೆ ಮಾತನಾಡುವ ಬಾಯಿ ನನ್ನದಲ್ಲ.

ಇವರು ತಮ್ಮ ಕಣ್ಣುಗಳಿಂದ ಕೇಳಿಸಿಕೊಳ್ಳುವುದನ್ನು ಕಲಿಯಲು ಮೊದಲು ತಮ್ಮ ಕಿವಿಗಳನ್ನು ನಾಶಪಡಿಸಿಕೊಳ್ಳಬೇಕೆ? ದೊಡ್ಡ ನಗಾರಿಗಳಂತೆ ಅಥವಾ ಜೋರಾಗಿ ಕೂಗುವ ಉಪದೇಶಕರಂತೆ ಸದ್ದು ಮಾಡಬೇಕೇ? ಅಥವಾ ತಡಬಡಿಸಿ ಮಾತನಾಡುವವರನ್ನು ಮಾತ್ರ ಅವರು ನಂಬುತ್ತಾರೆಯೇ?

ಅವರಲ್ಲಿ ಹೆಮ್ಮೆ ಪಡುವಂತಹದ್ದು ಏನೋ ಇದೆ. ತಮ್ಮನ್ನು ಹೆಮ್ಮೆಪಡುವಂತೆ ಮಾಡುವ ಆ ವಿಷಯಕ್ಕೆ ಅವರು ಏನೆಂದು ಕರೆಯುತ್ತಾರೆ? ಅವರು ಅದನ್ನು 'ಸಂಸ್ಕೃತಿ' ಎಂದು ಕರೆಯುತ್ತಾರೆ; ಇದು ಅವರನ್ನು ಸಾಮಾನ್ಯ ಕುರಿಗಾಹಿಗಳಿಗಿಂತ ವಿಭಿನ್ನವಾಗಿ ಮಾಡುತ್ತದೆ.

ಆದ್ದರಿಂದ, ತಮ್ಮನ್ನು ತಿರಸ್ಕರಿಸಿಕೊಳ್ಳಬೇಕು ಎಂಬ ಮಾತುಗಳನ್ನು ಕೇಳಲು ಅವರು ಇಷ್ಟಪಡುವುದಿಲ್ಲ. ಹಾಗಾಗಿ, ನಾನು ಅವರ ಹೆಮ್ಮೆಯ ಜೊತೆಗೇ ಮಾತನಾಡುತ್ತೇನೆ.

ಅತ್ಯಂತ ತಿರಸ್ಕಾರಾರ್ಹವಾದ ವಿಷಯದ ಕುರಿತು ನಾನು ಇವರೊಂದಿಗೆ ಮಾತನಾಡುತ್ತೇನೆ: ಅದೇ 'ಕೊನೆಮಾನವ'! ಮತ್ತು ಜರತುಷ್ಟ್ರನು ಜನರಿಗೆ ಹೀಗೆ ಹೇಳಿದನು:

ಮನುಷ್ಯನು ತನ್ನ ಗುರಿಯನ್ನು ನಿರ್ಧರಿಸುವ ಸಮಯ ಬಂದಿದೆ. ಮಾನವನು ತನ್ನ ಅತ್ಯುನ್ನತ ಭರವಸೆಯ ಬೀಜವನ್ನು ಬಿತ್ತುವ ಸಮಯ ಬಂದಿದೆ.

ಅದಕ್ಕಾಗಿ ಅವನ ಮಣ್ಣು ಇನ್ನೂ ಫಲವತ್ತಾಗಿದೆ. ಆದರೆ ಒಂದು ದಿನ ಆ ಮಣ್ಣು ಬಡವಾಗುತ್ತದೆ ಮತ್ತು ಶಕ್ತಿ ಕಳೆದುಕೊಳ್ಳುತ್ತದೆ, ಆಗ ಅಲ್ಲಿ ದೊಡ್ಡ ಮರಗಳು ಬೆಳೆಯಲು ಸಾಧ್ಯವಾಗುವುದಿಲ್ಲ.

ಅಯ್ಯೋ! ಮಾನವನು ತನ್ನ ಆಸೆಯ ಬಾಣವನ್ನು ಸ್ವತಃ ತನ್ನನ್ನು ದಾಟಿಸಲಾಗದ ಕಾಲ ಹತ್ತಿರ ಬರುತ್ತಿದೆ—ಮತ್ತು ಅವನ ಬಿಲ್ಲಿನ ತಂತಿ ಶಬ್ದ ಮಾಡುವುದನ್ನೇ ಮರೆತುಹೋಗಿರುತ್ತದೆ!

ನಾನು ನಿಮಗೆ ಹೇಳಬಯಸುವುದೇನೆಂದರೆ: ನರ್ತಿಸುವ ನಕ್ಷತ್ರಕ್ಕೆ ಜನ್ಮ ನೀಡಲು ನಿಮ್ಮಲ್ಲಿ ಇನ್ನೂ ಅಸ್ತವ್ಯಸ್ತತೆ ಉಳಿದಿರಬೇಕು. ಹಾಗೂ ನನಗೆ ತಿಳಿದಿದೆ: ನಿಮ್ಮಲ್ಲಿ ಇನ್ನೂ ಆ ಅಸ್ತವ್ಯಸ್ತತೆ ಉಳಿದಿದೆ ಎಂದು.

ಅಯ್ಯೋ! ಮಾನವನು ಯಾವುದೇ ನಕ್ಷತ್ರಕ್ಕೆ ಜನ್ಮ ನೀಡಲಾಗದ ಕಾಲ ಬರುತ್ತದೆ. ಅಯ್ಯೋ! ಅತ್ಯಂತ ತಿರಸ್ಕಾರಾರ್ಹ ಮಾನವನ ಕಾಲ ಬರುತ್ತದೆ, ಅವನು ತನ್ನ ಮೇಲೆ ತಾನೇ ಅಸಹ್ಯ ಪಡಲು ಕೂಡ ಅಸಮರ್ಥನಾಗಿರುತ್ತಾನೆ.

ನೋಡಿ! ನಾನು ನಿಮಗೆ ಆ 'ಕೊನೆಮಾನವ'ನನ್ನು ತೋರಿಸುತ್ತೇನೆ.

"ಪ್ರೀತಿ ಎಂದರೇನು? ಸೃಷ್ಟಿ ಎಂದರೇನು? ಹಂಬಲ ಎಂದರೇನು? ನಕ್ಷತ್ರ ಎಂದರೇನು?"—ಹೀಗೆ ಆ ಕೊನೆಮಾನವ ಕೇಳುತ್ತಾ ಕಣ್ಣು ಮಿಟುಕಿಸುತ್ತಾನೆ.

ಅಷ್ಟೊತ್ತಿಗೆ ಭೂಮಿಯು ಚಿಕ್ಕದಾಗಿರುತ್ತದೆ ಮತ್ತು ಎಲ್ಲವನ್ನೂ ಚಿಕ್ಕದಾಗಿ ಮಾಡುವ ಆ ಕೊನೆಮಾನವ ಅದರ ಮೇಲೆ ಹಾರಾಡುತ್ತಾನೆ. ನೆಲದ ಮೇಲಿನ ಸಣ್ಣ ಹುಳುಗಳಂತೆ, ಅವನ ಸಂತತಿಯನ್ನು ಅಳಿಸಲು ಸಾಧ್ಯವಿಲ್ಲ; ಈ ಕೊನೆಮಾನವ ಅತಿ ಹೆಚ್ಚು ಕಾಲ ಬದುಕುತ್ತಾನೆ.

"ನಾವು ಸಂತೋಷವನ್ನು ಕಂಡುಕೊಂಡಿದ್ದೇವೆ"—ಎಂದು ಕೊನೆಮಾನವರು ಹೇಳುತ್ತಾ ಕಣ್ಣು ಮಿಟುಕಿಸುತ್ತಾರೆ.

ಬದುಕಲು ಕಷ್ಟವಿರುವ ಜಾಗಗಳನ್ನು ಅವರು ಬಿಟ್ಟು ಬಂದಿದ್ದಾರೆ; ಏಕೆಂದರೆ ಅವರು ಬೆಚ್ಚಗಿರಬೇಕು. ಅವರು ತಮ್ಮ ನೆರೆಹೊರೆಯವನನ್ನು ಪ್ರೀತಿಸುತ್ತಾರೆ ಮತ್ತು ಅವರಿಗೆ ಅಂಟಿಕೊಂಡಿರುತ್ತಾರೆ; ಏಕೆಂದರೆ ಅವರಿಗೆ ಆ ಬೆಚ್ಚಗಿನ ಅನುಭವ ಬೇಕು.

ಅಸ್ವಸ್ಥರಾಗುವುದು ಮತ್ತು ಅನುಮಾನಪಡುವುದನ್ನು ಅವರು ಪಾಪವೆಂದು ಭಾವಿಸುತ್ತಾರೆ; ಅವರು ಜಾಗರೂಕರಾಗಿ ನಡೆಯುತ್ತಾರೆ. ಕಲ್ಲುಗಳ ಮೇಲೆ ಅಥವಾ ಜನರ ಮೇಲೆ ಎಡವಿ ಬೀಳುವವನು ಇನ್ನೂ ಮೂರ್ಖನೇ ಸರಿ!

ಅಗಾಗ ಸ್ವಲ್ಪ ವಿಷ: ಅವರಿಗೆ ಒಳ್ಳೆಯ ಕನಸುಗಳನ್ನು ನೀಡುತ್ತದೆ. ಮತ್ತು ಕೊನೆಯಲ್ಲಿ ಹೆಚ್ಚು ವಿಷ ಸೇವಿಸಿ ನೆಮ್ಮದಿಯಿಂದ ಸಾಯುತ್ತಾರೆ.

ಜನರು ಇನ್ನೂ ಕೆಲಸ ಮಾಡುತ್ತಾರೆ, ಏಕೆಂದರೆ ಕೆಲಸವು ಒಂದು ಹವ್ಯಾಸದಂತಿದೆ. ಆದರೆ ಆ ಹವ್ಯಾಸವು ತಮಗೆ ನೋವುಂಟು ಮಾಡದಂತೆ ಅವರು ಜಾಗ್ರತೆ ವಹಿಸುತ್ತಾರೆ.

ಯಾರೂ ಬಡವರೂ ಆಗುವುದಿಲ್ಲ ಅಥವಾ ಶ್ರೀಮಂತರೂ ಆಗುವುದಿಲ್ಲ; ಅವೆರಡೂ ಅತಿಯಾದ ತೊಂದರೆ ಎಂದು ಭಾವಿಸುತ್ತಾರೆ. ಯಾರು ಆಳಲು ಬಯಸುತ್ತಾರೆ? ಇನ್ನು ಯಾರು ಆಜ್ಞೆ ಪಾಲಿಸಲು ಬಯಸುತ್ತಾರೆ? ಎರಡೂ ಬಹಳ ತಲೆನೋವಿನ ಕೆಲಸ.

ಯಾವ ನಾಯಕನೂ ಇಲ್ಲ, ಎಲ್ಲರೂ ಒಂದೇ ಗುಂಪು! ಎಲ್ಲರಿಗೂ ಒಂದೇ ವಿಷಯ ಬೇಕು; ಎಲ್ಲರೂ ಸಮಾನರು: ವಿಭಿನ್ನ ರೀತಿಯಲ್ಲಿ ಆಲೋಚಿಸುವವರು ತಾನಾಗಿಯೇ ಹುಚ್ಚಾಸ್ಪತ್ರೆಗೆ ಸೇರಿಕೊಳ್ಳುತ್ತಾರೆ.

"ಹಳೆಯ ಕಾಲದಲ್ಲಿ, ಇಡೀ ಪ್ರಪಂಚವೇ ಹುಚ್ಚು ಹಿಡಿದಂತಿತ್ತು,"—ಎಂದು ಅವರಲ್ಲಿರುವ ಬುದ್ಧಿವಂತರು ಹೇಳುತ್ತಾ ಕಣ್ಣು ಮಿಟುಕಿಸುತ್ತಾರೆ.

ಅವರು ಬಹಳ ಚತುರರು ಮತ್ತು ನಡೆದಿರುವುದನ್ನೆಲ್ಲಾ ತಿಳಿದಿರುತ್ತಾರೆ: ಹಾಗಾಗಿ ಅವರು ವಿಚಾರಗಳನ್ನು ಲೇವಡಿ ಮಾಡುವುದನ್ನು ನಿಲ್ಲಿಸುವುದೇ ಇಲ್ಲ. ಜನರು ವಾದಕ್ಕೆ ಬಿದ್ದು ಬೇಗನೆ ಒಂದಾಗುತ್ತಾರೆ—ಇಲ್ಲದಿದ್ದರೆ ಅದು ಅವರಿಗೆ ಹೊಟ್ಟೆಗೆ ತೊಂದರೆಯುಂಟು ಮಾಡಬಹುದು.

ಅವರು ದಿನ ಕಳೆಯಲು ಸಣ್ಣ ಸುಖಗಳನ್ನು ಹೊಂದಿರುತ್ತಾರೆ, ರಾತ್ರಿ ಕಳೆಯಲೂ ಸಣ್ಣ ಸುಖಗಳನ್ನು ಹೊಂದಿರುತ್ತಾರೆ, ಆದರೆ ಅವರು ತಮ್ಮ ಆರೋಗ್ಯದ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ.

"ನಾವು ಸಂತೋಷವನ್ನು ಕಂಡುಕೊಂಡಿದ್ದೇವೆ,"—ಎಂದು ಕೊನೆಮಾನವರು ಹೇಳುತ್ತಾ ಕಣ್ಣು ಮಿಟುಕಿಸುತ್ತಾರೆ.

ಇಲ್ಲಿಗೆ ಜರತುಷ್ಟ್ರನ ಮೊದಲ ಭಾಷಣ ಅಥವಾ 'ಪ್ರಸ್ತಾವನೆ' ಮುಕ್ತಾಯವಾಯಿತು: ಏಕೆಂದರೆ ಈ ಹಂತದಲ್ಲಿ ಜನರ ಕೂಗು ಮತ್ತು ನಗು ಅವನನ್ನು ಅಡ್ಡಿಪಡಿಸಿತು.

"ಓ ಜರತುಷ್ಟ್ರ, ನಮಗೆ ಈ ಕೊನೆಮಾನವನನ್ನು ಕೊಡು!"—ಎಂದು ಅವರು ಕೂಗಿದರು—"ನಮ್ಮನ್ನು ಈ ಕೊನೆಮಾನವನಂತೆ ಮಾಡು! ನಾವು ನಿನಗೆ ಅತಿಮಾನವನನ್ನು ಉಡುಗೊರೆಯಾಗಿ ನೀಡುತ್ತೇವೆ!" ಎಂದು ಎಲ್ಲ ಜನರು ಸಂತೋಷಪಟ್ಟರು.

ಆದರೆ ಜರತುಷ್ಟ್ರನು ದುಃಖಿತನಾಗಿ ತನ್ನ ಹೃದಯಕ್ಕೆ ಹೀಗೆ ಹೇಳಿಕೊಂಡನು:

"ಅವರಿಗೆ ನಾನು ಅರ್ಥವಾಗುತ್ತಿಲ್ಲ: ಈ ಕಿವಿಗಳಿಗೆ ಸರಿಹೊಂದುವ ಧ್ವನಿ ನನ್ನದಲ್ಲ.

ಬಹುಶಃ ನಾನು ಬೆಟ್ಟದ ಮೇಲೆ ಬಹಳ ಕಾಲ ಕಳೆದಿದ್ದೇನೆ; ತೊರೆಗಳ ಮತ್ತು ಮರಗಳ ಮಾತನ್ನು ಅತಿಯಾಗಿ ಕೇಳಿಸಿಕೊಂಡಿದ್ದೇನೆ: ಈಗ ನಾನು ಕುರಿಗಾಹಿಗಳಂತೆ ಇವರ ಜೊತೆ ಮಾತನಾಡುತ್ತಿದ್ದೇನೆ.

ನನ್ನ ಆತ್ಮವು ಮುಂಜಾನೆಯ ಬೆಟ್ಟಗಳಂತೆ ಶಾಂತವಾಗಿದೆ ಮತ್ತು ಸ್ಪಷ್ಟವಾಗಿದೆ. ಆದರೆ ಅವರು ನಾನು ನಿರ್ದಯಿ ಮತ್ತು ತಮಾಷೆ ಮಾಡುವವನು ಎಂದು ಭಾವಿಸುತ್ತಾರೆ.

ಮತ್ತು ಈಗ ಅವರು ನನ್ನನ್ನು ನೋಡಿ ನಗುತ್ತಿದ್ದಾರೆ: ಅವರು ನಗುತ್ತಿರುವಾಗ ನನ್ನನ್ನು ದ್ವೇಷಿಸುತ್ತಿದ್ದಾರೆ ಕೂಡ. ಅವರ ನಗುವಿನಲ್ಲಿ ಹಿಮದಂತ ಶೀತವಿದೆ."

0 ಕಾಮೆಂಟ್‌(ಗಳು):

ಕಾಮೆಂಟ್‌‌ ಪೋಸ್ಟ್‌ ಮಾಡಿ

 
ಜರಥುಷ್ಟ್ರನ ಉಪದೇಶಗಳು. Design by Pocket - Fixed by Blogger templates