ಶನಿವಾರ, ಏಪ್ರಿಲ್ 4, 2026

ಪ್ರಸ್ತಾವನೆ - 3

ಶನಿವಾರ, ಏಪ್ರಿಲ್ 4, 2026
ಜರತುಷ್ಟ್ರನು ಕಾಡಿಗೆ ಹೊಂದಿಕೊಂಡಿದ್ದ ಸಮೀಪದ ಪಟ್ಟಣಕ್ಕೆ ಬಂದಾಗ, ಮಾರುಕಟ್ಟೆಯ ಮೈದಾನದಲ್ಲಿ ಅನೇಕ ಜನರು ಒಟ್ಟುಗೂಡಿರುವುದನ್ನು ಕಂಡನು; ಏಕೆಂದರೆ ಹಗ್ಗದ ಮೇಲೆ ನಡೆಯುವ ಕಲಾವಿದನು ಪ್ರದರ್ಶನ ನೀಡಲಿರುವುದಾಗಿ ಘೋಷಿಸಲಾಗಿತ್ತು. ಆಗ ಜರತುಷ್ಟ್ರನು ಜನರೊಂದಿಗೆ ಹೀಗೆ ಮಾತಾಡಿದನು:

ನಾನು ನಿಮಗೆ ಅತಿಮಾನವನನ್ನು ಬೋಧಿಸುತ್ತೇನೆ. ಅದು ಮಾನವನು ತನ್ನನ್ನು ಮೀರಿ ತಲುಪಬೇಕಾದ ಒಂದು ಸ್ಥಿತಿ. ಮಾನವನ ಸ್ಥಿತಿಯನ್ನು ಮೀರಲು ನೀವು ಏನು ಮಾಡಿದ್ದೀರಿ?

ಇಲ್ಲಿಯವರೆಗೆ ಎಲ್ಲಾ ಜೀವಿಗಳು ತಮ್ಮನ್ನು ಮೀರಿದ ಏನನ್ನೋ ಸೃಷ್ಟಿಸಿವೆ; ಆದರೆ ನೀವು, ಮುಂದೆ ಸಾಗುವ ಬದಲು ಹಿಂದೆ ಹೋಗಲು ಬಯಸುವಿರಾ?, ಮತ್ತು ಮಾನವನನ್ನು ಮೀರುವುದರ ಬದಲು ಪ್ರಾಣಿಗಳಾಗುವ ಕಡೆಗೆ ಹಿಂದಿರುಗಲು ಇಚ್ಛಿಸುವಿರಾ?.

ಮಂಗ ಮಾನವನಿಗೆ ಏನಾಗಬೇಕು? ಒಂದು ತಮಾಷೆಯ ಸಂಗತಿ, ಲಜ್ಜೆಯ ಸಂಗತಿ. ಅದೇ ರೀತಿಯಲ್ಲಿ ಮಾನವನು ಅತಿಮಾನವನಿಗೆ "ಒಂದು ತಮಾಷೆಯ ಸಂಗತಿ, ಲಜ್ಜೆಯ ಸಂಗತಿ."

ನೀವು ಹುಳುವಿನಿಂದ ಮಾನವನಾಗುವ ದಾರಿಯನ್ನು ಹಾದು ಬಂದಿದ್ದೀರಿ, ಆದರೆ ನಿಮ್ಮೊಳಗೆ ಇನ್ನೂ ಬಹಳಷ್ಟು ಹುಳುವಿನ ಗುಣಗಳೇ ಉಳಿದಿವೆ. ಒಮ್ಮೆ ನೀವು ಕೋತಿಗಳಾಗಿದ್ದಿರಿ, ಮತ್ತು ಇನ್ನೂ ಸಹ ಮಾನವನು ನಿಜವಾದ ಕೋತಿಗಿಂತಲೂ ಹೆಚ್ಚು ಕೋತಿಯಾಗಿದ್ದಾನೆ.

ನಿಮ್ಮೊಳಗಿನ ಅತಿ ಜ್ಞಾನಿಯೂ ಸಹ ಕೇವಲ ಸಸ್ಯ ಹಾಗೂ ಭೂತಗಳ ಮಿಶ್ರಣದಲ್ಲಿನ ಗೊಂದಲ ಮಾತ್ರ. ಆದರೆ ನಾನು ನಿಮಗೆ ಭೂತಗಳಾಗಲು ಅಥವಾ ಸಸ್ಯಗಳಾಗಲು ಹೇಳುತ್ತಿಲ್ಲ.

ನೋಡಿ, ನಾನು ನಿಮಗೆ ಅತಿಮಾನವನನ್ನು ಬೋಧಿಸುತ್ತೇನೆ!

ಅತಿಮಾನವನು ಈ ಭೂಮಿಯ ಅರ್ಥ. ಅತಿಮಾನವನೇ ಭೂಮಿಯ ಅರ್ಥವಾಗಬೇಕು! - ಎಂದು ನಿಮ್ಮ ಆಂತರ್ಯ ಹೇಳಲಿ.

ನನ್ನ ಸಹೋದರರೇ, ನಾನು ನಿಮ್ಮಲ್ಲಿ ವಿನಂತಿಸುತ್ತೇನೆ, ಭೂಮಿಗೆ ನಿಷ್ಟರಾಗಿರಿ, ಮತ್ತು ನಿಮ್ಮೊಂದಿಗೆ ಭೂಮಿಯಾಚೆಗಿನ ಭರವಸೆಗಳ ಬಗ್ಗೆ ಮಾತನಾಡುವವರನ್ನು ನಂಬಬೇಡಿ! ಅವರಿಗೆ ತಿಳಿದಿರಲಿ ಅಥವಾ ತಿಳಿಯದಿರಲಿ - ಅವರು ಖಂಡಿತ ವಿಷಕಾರಿ.

ಅವರು ಜೀವನವನ್ನು ತಿರಸ್ಕರಿಸುವವರು, ಕುಸಿಯುತ್ತಿರುವವರು ಮತ್ತು ವಿಷಭರಿತರಾದವರು; ಭೂಮಿ ಅವರಿಂದ ಬೇಸತ್ತಿದೆ: ಆದ್ದರಿಂದ ಅವರನ್ನು ದೂರವಿಡಿ!

ಒಮ್ಮೆ ದೇವರನ್ನು ನಿಂದಿಸುವುದು ಅತಿ ದೊಡ್ಡ ಪಾಪವಾಗಿತ್ತು; ಆದರೆ ದೇವರು ಸತ್ತಿದ್ದಾನೆ, ಮತ್ತು ಅದರೊಂದಿಗೆ ಆ ನಿಂದಕರೂ ಕೂಡ ಅಳಿದುಹೋದರು. ಈಗ ಭೂಮಿಯನ್ನು ನಿಂದಿಸುವುದು ಅತ್ಯಂತ ಭಯಾನಕ ಪಾಪವಾಗಿದೆ, ಮತ್ತು ಅಜ್ಞಾತದ ಹೃದಯವನ್ನು ಭೂಮಿಯ ಅರ್ಥಕ್ಕಿಂತ ಮೇಲಾಗಿ ಮೌಲ್ಯೀಕರಿಸುವುದು ಪಾಪವಾಗಿದೆ!

ಒಮ್ಮೆ ಆತ್ಮವು ದೇಹವನ್ನು ತಿರಸ್ಕಾರದಿಂದ ನೋಡುತ್ತಿತ್ತು, ಮತ್ತು ಆ ತಿರಸ್ಕಾರವೇ ಅತಿ ಉನ್ನತವಾದದ್ದು ಎಂದು ಪರಿಗಣಿಸಲಾಗುತ್ತಿತ್ತು: ಆತ್ಮವು ದೇಹವನ್ನು ದುರ್ಬಲ, ಭಯಾನಕ, ಮತ್ತು ಹಸಿದಿರುವಂತೆ ಮಾಡಲು ಬಯಸುತ್ತಿತ್ತು. ಹೀಗೆ ಅದು ದೇಹದಿಂದ ಮತ್ತು ಭೂಮಿಯಿಂದ ತಪ್ಪಿಸಿಕೊಳ್ಳಬಹುದು ಎಂದು ಭಾವಿಸಿತು.

ಅಯ್ಯೋ, ಆ ಆತ್ಮವೇ ಸ್ವತಃ ದುರ್ಬಲ, ಭಯಾನಕ, ಮತ್ತು ಹಸಿದದ್ದಾಗಿತ್ತು; ಮತ್ತು ಕ್ರೌರ್ಯವೇ ಆ ಆತ್ಮದ ಆನಂದವಾಗಿತ್ತು!

ಆದರೆ ಸಹೋದರರೇ, ನನಗೆ ಹೇಳಿ: ನಿಮ್ಮ ದೇಹವು ನಿಮ್ಮ ಆತ್ಮದ ಬಗ್ಗೆ ಏನು ಹೇಳುತ್ತದೆ? ನಿಮ್ಮ ಆತ್ಮವು ದಾರಿದ್ರ್ಯ, ಅಶುದ್ಧತೆ ಮತ್ತು ದುಃಖಕರ ಆತ್ಮತೃಪ್ತಿಯಲ್ಲವೇ?

ನಿಜವಾಗಿ, ಮನುಷ್ಯನು ಒಂದು ಅಶುದ್ಧ ಹೊಳೆಯಂತೆ. ಅಶುದ್ಧವಾಗದಂತೆ ಹೊಳೆಯನ್ನು ಸ್ವೀಕರಿಸಲು ಒಬ್ಬನು ಸಮುದ್ರವಾಗಿರಬೇಕು.

ನೋಡಿ, ನಾನು ನಿಮಗೆ ಅತಿಮಾನವನನ್ನು ಬೋಧಿಸುತ್ತೇನೆ: ಅವನು ಆ ಸಮುದ್ರ; ನಿಮ್ಮ ಮಹಾ ತಿರಸ್ಕಾರವು ಅವನಲ್ಲಿ ಮರೆಯಾಗಬಹುದು.

ನೀವು ಅನುಭವಿಸಬಹುದಾದ ಅತಿ ದೊಡ್ಡ ಸಂಗತಿ ಯಾವುದು? ಅದು ಮಹಾ ತಿರಸ್ಕಾರದ ಕ್ಷಣ. ನಿಮ್ಮ ಸಂತೋಷವೂ ಸಹ ನಿಮಗೆ ಅಸಹ್ಯವಾಗುವ ಕ್ಷಣ, ಹಾಗೆಯೇ ನಿಮ್ಮ ಬುದ್ಧಿ ಮತ್ತು ಸದ್ಗುಣವೂ ಸಹ ಅಸಹ್ಯವಾಗುವ ಕ್ಷಣ.

"ನನ್ನ ಸಂತೋಷದಿಂದ ಏನು ಪ್ರಯೋಜನ! ಅದು ದಾರಿದ್ರ್ಯ, ಅಶುದ್ಧತೆ ಮತ್ತು ದುಃಖಕರ ಆತ್ಮತೃಪ್ತಿಯ ಭ್ರಮೆ. ಆದರೆ ನನ್ನ ಸಂತೋಷವೇ ಅಸ್ತಿತ್ವವನ್ನು ಸಮರ್ಥಿಸಬೇಕಲ್ಲವೇ!" ಎನ್ನುವ ಕ್ಷಣ

"ನನ್ನ ಬುದ್ಧಿಯಿಂದ ಏನು ಪ್ರಯೋಜನ! ಅದು ಸಿಂಹವು ಆಹಾರವನ್ನು ಬಯಸುವಂತೆ ಜ್ಞಾನವನ್ನು ಬಯಸುತ್ತದೆಯೇ? ಅದು ದಾರಿದ್ರ್ಯ, ಅಶುದ್ಧತೆ ಮತ್ತು ದುಃಖಕರ ಆತ್ಮತೃಪ್ತಿಯ ಭ್ರಮೆ!" ಎನ್ನುವ ಕ್ಷಣ

"ನನ್ನ ಸದ್ಗುಣದಿಂದ ಏನು ಪ್ರಯೋಜನ! ಅದು ಇನ್ನೂ ನನ್ನನ್ನು ಉತ್ಸಾಹಭರಿತನಾಗಿಸಿಲ್ಲ. ನನ್ನ ಒಳ್ಳೆಯದು ಮತ್ತು ಕೆಟ್ಟದ್ದರಿಂದ ನಾನು ಎಷ್ಟು ದಣಿದಿದ್ದೇನೆ! ಇದು ಎಲ್ಲವೂ ದಾರಿದ್ರ್ಯ, ಅಶುದ್ಧತೆ ಮತ್ತು ದುಃಖಕರ ಆತ್ಮತೃಪ್ತಿಯ ಭ್ರಮೆ!" ಎನ್ನುವ ಕ್ಷಣ

"ನನ್ನ ನ್ಯಾಯಯುತ ಜೀವನದಿಂದ ಪ್ರಯೋಜನವೇನು?! ನಾನು, ಉರಿಯುವ ಇಂಧನ ಮತ್ತು ಅದರಿಂದ ಉತ್ಪತ್ತಿಯಾಗುವ ಶಕ್ತಿ ಎಂದು ನನಗನಿಸುತ್ತಿಲ್ಲ. ಆದರೆ, ಉರಿಯುವ ಶಕ್ತಿ ಮತ್ತು ಇಂಧನವೇ ನಿಜವಾದ ನ್ಯಾಯ!" ಎನ್ನುವ ಕ್ಷಣ

"ನನ್ನ ಕರುಣೆಯಿಂದ ಪ್ರಯೋಜನವೇನು?! ಮಾನವರನ್ನು ಪ್ರೀತಿಸಿದವನನ್ನು ಶಿಲುಬೆಗೆ ಹಾಕಿದ ಮೊಳೆಗಳು ಕರುಣೆ ಅಲ್ಲವೇ? ಆದರೆ ನನ್ನ ಕರುಣೆ ಶಿಲುಬೆಗೆ ಹಾಕುವಂತಹುದಲ್ಲ." ಎನ್ನುವ ಕ್ಷಣ

ನೀವು ಯಾವಾಗಲಾದರೂ ಹೀಗೆ ಮಾತನಾಡಿದ್ದೀರಾ? ನೀವು ಯಾವಾಗಲಾದರೂ ಹೀಗೆ ಅತ್ತಿದ್ದೀರಾ? ಅಯ್ಯೋ! ನೀವು ಹೀಗೆ ಅಳುವ ಶಬ್ದ ನನ್ನ ಕಿವಿಗೆ ಬಿದ್ದಿದ್ದರೆ ಎಷ್ಟು ಹಿತವಾಗಿರುತ್ತಿತ್ತು!

ನಿಮ್ಮಲ್ಲಿನ ಪಾಪದಿಂದ ನೀವು ಸ್ವರ್ಗಕ್ಕಾಗಿ ಹಾತೊರೆಯುತ್ತಿಲ್ಲ—ನಿಮ್ಮ ಆತ್ಮತೃಪ್ತಿಯೇ ಸ್ವರ್ಗಕ್ಕಾಗಿ ಹಾತೊರೆಯುತ್ತಿದೆ; ಪಾಪ ಮಾಡುವಲ್ಲಿನ ನಿಮ್ಮಲ್ಲಿನ ಮಿತಿಯೇ ಸ್ವರ್ಗಕ್ಕಾಗಿ ಹಾತೊರೆಯುತ್ತಿದೆ!

ನಿಮ್ಮನ್ನು ತನ್ನ ನಾಲಿಗೆಯಿಂದ ನುಂಗುವ ಮಿಂಚು ಎಲ್ಲಿದೆ? ನಿಮ್ಮೊಳಗೆ ಹುಟ್ಟಬೇಕಾದ ಉನ್ಮಾದ ಎಲ್ಲಿದೆ?

ನೋಡಿ, ನಾನು ನಿಮಗೆ ಅತಿಮಾನವನನ್ನು ಬೋಧಿಸುತ್ತೇನೆ: ಅವನೇ ಆ ಮಿಂಚು, ಅವನೇ ಆ ಉನ್ಮಾದ!

ಜರತುಷ್ಟ್ರನು ಹೀಗೆ ಮಾತನಾಡಿದ ನಂತರ, ಜನರ ಗುಂಪಲ್ಲಿ ಒಬ್ಬ ಕೂಗಿ ಹೇಳಿದ: "ಹಗ್ಗದ ಮೇಲೆ ನಡೆಯುವವನ ಬಗ್ಗೆ ಸಾಕಷ್ಟು ಕೇಳಿದ್ದೇವೆ; ಈಗ ಅವನನ್ನು ನೋಡೋಣ!"

ಎಲ್ಲರೂ ಜರತುಷ್ಟ್ರನನ್ನು ನೋಡಿ ನಕ್ಕರು. ಆದರೆ ಹಗ್ಗದ ಮೇಲೆ ನಡೆವ ಕಲಾವಿದನು ಜರತುಷ್ಟ್ರನ ಮಾತುಗಳು ತನಗೇ ಅನ್ವಯಿಸುತ್ತವೆ ಎಂದು ಭಾವಿಸಿ ತನ್ನ ಪ್ರದರ್ಶನವನ್ನು ಪ್ರಾರಂಭಿಸಿದನು.

0 ಕಾಮೆಂಟ್‌(ಗಳು):

ಕಾಮೆಂಟ್‌‌ ಪೋಸ್ಟ್‌ ಮಾಡಿ

 
ಜರಥುಷ್ಟ್ರನ ಉಪದೇಶಗಳು. Design by Pocket - Fixed by Blogger templates