ಜರತುಷ್ಟ್ರನು ಬೆಟ್ಟದಿಂದ ಒಬ್ಬನೇ ಕೆಳಗಿಳಿದನು; ಯಾರೂ ಅವನನ್ನು ಎದುರುಗೊಳ್ಳಲಿಲ್ಲ. ಆದರೆ ಅವನು ಅರಣ್ಯಕ್ಕೆ ಪ್ರವೇಶಿಸಿದಾಗ, ಏಕಾಏಕಿ ಅವನ ಮುಂದೆ ಒಬ್ಬ ವೃದ್ಧನು ಕಾಣಿಸಿಕೊಂಡನು—ಅವನು ತನ್ನ ಪವಿತ್ರ ಗುಡಿಸಲು ಬಿಟ್ಟು ಬೇರುಗಳನ್ನು ಹುಡುಕಲು ಬಂದಿದ್ದನು. ಆಗ ಆ ವೃದ್ಧನು ಜರತುಷ್ಟ್ರನಿಗೆ ಹೀಗೆ ಹೇಳಿದನು:
"ಈ ಅಲೆಮಾರಿ ನನಗೆ ಅಪರಿಚಿತನಲ್ಲ: ಅನೇಕ ವರ್ಷಗಳ ಹಿಂದೆ ಈತ ಇಲ್ಲಿ ಹಾದುಹೋಗಿದ್ದನು.
ಇವನನ್ನು ಜರತುಷ್ಟ್ರ ಎಂದು ಕರೆಯುತ್ತಿದ್ದರು; ಆದರೆ ಈಗ ಈತ ಬದಲಾಗಿದ್ದಾನೆ.
ಆಗ ನೀನು ನಿನ್ನ ಭಸ್ಮದೊಂದಿಗೆ ಬೆಟ್ಟಕ್ಕೆ ಹೋದೆ; ಈಗ ನಿನ್ನ ಬೆಂಕಿಯೊಂದಿಗೆ ಕಣಿವೆಗಳ ಕಡೆಗೆ ಹೋಗುವೆಯಾ? ಬೆಂಕಿ ಹಾಕುವವನಿಗೆ ಬರುವ ದುರಂತದ ಬಗ್ಗೆ ನಿನಗೆ ಭಯವಿಲ್ಲವೇ?
ಹೌದು, ನಾನು ಜರತುಷ್ಟ್ರನನ್ನು ಗುರುತಿಸಬಲ್ಲೆ. ಇವನ ಕಣ್ಣುಗಳು ಶುದ್ಧವಾಗಿವೆ, ಬಾಯಿಯ ಸುತ್ತ ಯಾವುದೇ ಅಸಹ್ಯ ಅಡಗಿಲ್ಲ. ಇವನು ನೃತ್ಯಪಟುವಿನಂತೆ ನಡೆಯುತ್ತಾನಲ್ಲವೇ?
ಜರತುಷ್ಟ್ರ ಬದಲಾಗಿದ್ದಾನೆ; ಜರತುಷ್ಟ್ರ ಈಗ ಮಗುವಾಗಿದ್ದಾನೆ; ಜರತುಷ್ಟ್ರ ಜಾಗೃತನಾಗಿದ್ದಾನೆ: ನಿದ್ರಿಸುತ್ತಿರುವವರ ಪ್ರದೇಶದಲ್ಲಿ ನೀನು ಹೋಗಿ ಏನು ಮಾಡುವೆ?
ನೀನು ಸಮುದ್ರದಂತಹ ಏಕಾಂತದಲ್ಲಿ ಜೀವಿಸಿದ್ದೆ, ಅದು ನಿನ್ನನ್ನು ತೇಲಿಸಿಕೊಂಡು ಬಂದಿತ್ತು. ಅಯ್ಯೋ, ಈಗ ನೀನು ದಡದ ಕಡೆಗೆ ಹೋಗುವೆಯಾ? ಮತ್ತೆ ನಿನ್ನ ಜೀವದ ಭಾರವನ್ನು ನೀನೇ ಹೊತ್ತು ನಡೆಯುವೆಯಾ?"
ಜರತುಷ್ಟ್ರ ಉತ್ತರಿಸಿದನು: "ನಾನು ಮಾನವಕುಲವನ್ನು ಪ್ರೀತಿಸುತ್ತೇನೆ."
"ಏಕೆ?" ಎಂದು ಸಂತನು ಕೇಳಿದನು. "ನಾನು ಕಾಡಿಗೂ, ಮರುಭೂಮಿಗೂ ಹೋಗಿದ್ದು? ಅದು ನಾನು ಮನುಷ್ಯರನ್ನು ಬಹಳ ಹೆಚ್ಚು ಪ್ರೀತಿಸಿದ್ದುದರಿಂದಲೇ ಅಲ್ಲವೇ?
ಈಗ ನಾನು ದೇವರನ್ನು ಪ್ರೀತಿಸುತ್ತೇನೆ: ಮನುಷ್ಯರನ್ನು ನಾನು ಪ್ರೀತಿಸುವುದಿಲ್ಲ. ಮನುಷ್ಯರು ನನಗೆ ಬಹಳ ಅಪೂರ್ಣರು. ಮನುಷ್ಯರ ಮೇಲಿನ ಪ್ರೀತಿ ನನ್ನ ಪಾಲಿಗೆ ಮಾರಣಾಂತಿಕ."
ಜರತುಷ್ಟ್ರ ಉತ್ತರಿಸಿದನು: "ನಾನು ಪ್ರೀತಿಯ ಬಗ್ಗೆ ಏನು ಹೇಳಲಿಲ್ಲವಲ್ಲ! ನಾನು ಮಾನವರಿಗೆ ಕಾಣಿಕೆಗಳನ್ನು ತಂದಿರುವೆನಷ್ಟೇ."
"ಅವರಿಗೆ ಏನನ್ನೂ ಕೊಡಬೇಡ," ಎಂದು ಸಂತನು ಹೇಳಿದನು. "ಅವರ ಜೀವನ ಭಾರದಲ್ಲಿ ನೀನು ಒಂದು ಭಾಗವನ್ನು ತೆಗೆದುಕೊಂಡು ಅವರ ಜೊತೆ ಹೊತ್ತು ಹೋಗು—ಅದು ಅವರಿಗೆ ಅತ್ಯಂತ ಸಂತೋಷಕರ ವಿಷಯ: ಅದು ನಿನಗೂ ಸಂತೋಷ ತರುವಂತಿದ್ದರೆ ಮಾತ್ರ!
ಆದರೆ ನೀನು ಅವರಿಗೆ ಕೊಡಲು ಬಯಸಿದ್ದೇ ಆದರೆ, ಬಿಕ್ಷೆಗಿಂತ ಹೆಚ್ಚು ಏನನ್ನೂ ಕೊಡಬೇಡ; ಮತ್ತು ಅದಕ್ಕೂ ಅವರು ಬೇಡುವಂತೆ ಮಾಡು!"
"ಇಲ್ಲ, ನಾನು ಭಿಕ್ಷೆ ಕೊಡುವುದಿಲ್ಲ. ನಾನು ಅಷ್ಟೊಂದು ಬಡವನಲ್ಲ." ಎಂದು ಜರತುಷ್ಟ್ರ ಉತ್ತರಿಸಿದನು.
ಸಂತನು ಜರತುಷ್ಟ್ರನ ಕಡೆಗೆ ನಕ್ಕು ಹೀಗೆ ಹೇಳಿದನು: "ಹಾಗಾದರೆ ಅವರು ನಿನ್ನ ಖಜಾನೆಯನ್ನು ಸ್ವೀಕರಿಸುವಂತೆ ನೋಡಿಕೋ! ಅವರು ನಮ್ಮಂತಹ ಸಂತರನ್ನು ಅನುಮಾನಾಸ್ಪದವಾಗಿ ನೋಡುತ್ತಾರೆ, ಮತ್ತು ನಾವು ಕಾಣಿಕೆಗಳೊಂದಿಗೆ ಬರುತ್ತೇವೆ ಎಂಬುದನ್ನು ನಂಬುವುದಿಲ್ಲ.
ನಮ್ಮ ಹೆಜ್ಜೆಗಳ ಧ್ವನಿ ಅವರ ಬೀದಿಗಳಲ್ಲಿ ಬಹಳ ಖಾಲಿಯಾಗಿ ಪ್ರತಿಧ್ವನಿಸುತ್ತದೆ. ಮತ್ತು ರಾತ್ರಿ ಅವರು ಹಾಸಿಗೆಯಲ್ಲಿ ಇದ್ದಾಗ ಅಥವಾ ಸೂರ್ಯೋದಯಕ್ಕೂ ಬಹಳ ಮುಂಚೆಯೇ ಹೊರಗೆ ಹೆಜ್ಜೆ ಸಪ್ಪಳ ಕೇಳಿದರೆ, ಅವರು ತಮ್ಮೊಳಗೆ "ಆ ಕಳ್ಳ ಎಲ್ಲಿ ಹೋಗುತ್ತಿದ್ದಾನೆ?" ಎಂದು ಕೇಳಿಕೊಳ್ಳುತ್ತಾರೆ.
ಜನರ ಬಳಿ ಹೋಗಬೇಡ, ಅರಣ್ಯದಲ್ಲೇ ಉಳಿದುಬಿಡು! ಬದಲಾಗಿ ಪ್ರಾಣಿಗಳ ಬಳಿ ಹೋಗು! ನನ್ನಂತಾಗು—ಕರಡಿಗಳ ನಡುವೆ ಕರಡಿಯಂತೆ, ಹಕ್ಕಿಗಳ ನಡುವಿನ ಹಕ್ಕಿಯಂತೆ?"
"ಆದರೆ, ಕಾಡಿನಲ್ಲಿ ಈ ಸಂತನು ಏನು ಮಾಡುತ್ತಾನೆ?" ಎಂದು ಜರತುಷ್ಟ್ರ ಕೇಳಿದನು.
ಸಂತನು ಉತ್ತರಿಸಿದನು: "ನಾನು ದೇವರನಾಮಗಳನ್ನು ರಚಿಸಿ ಅವನ್ನು ಹಾಡುತ್ತೇನೆ; ಮತ್ತು ದೇವರನಾಮಗಳನ್ನು ರಚಿಸುವಾಗ ನಾನು ನಗುತ್ತೇನೆ, ಅಳುತ್ತೇನೆ ಮತ್ತು ಗುನುಗುತ್ತೇನೆ: ಹೀಗೆ ನಾನು ದೇವರನ್ನು ಆರಾಧಿಸುತ್ತೇನೆ.
ಹಾಡುವುದರಿಂದ, ಅಳುವುದರಿಂದ, ನಗುವುದರಿಂದ ಮತ್ತು ಗುನುಗುಟ್ಟುವುದರಿಂದ ನನ್ನ ದೇವರನ್ನು ನಾನು ಸ್ತುತಿಸುತ್ತೇನೆ. ಆದರೆ ನೀನು ನನಗೆ ಕೊಡಲು ಯಾವ ಉಡುಗೊರೆ ತಂದಿರುವೆ?"
ಈ ಮಾತುಗಳನ್ನು ಕೇಳಿದ ಜರತುಷ್ಟ್ರ ಸಂತನಿಗೆ ನಮಸ್ಕರಿಸಿ ಹೀಗೆ ಹೇಳಿದನು: "ನಿನಗೆ ನಾನು ಏನನ್ನು ತಾನೇ ಕೊಡಬಲ್ಲೆ! ಬದಲಾಗಿ, ನಿನ್ನಿಂದ ಏನನ್ನಾದರೂ ಕಸಿದುಕೊಳ್ಳುವ ಮುನ್ನ ನಾನು ಬೇಗನೆ ಇಲ್ಲಿಂದ ಹೊರಡುತ್ತೇನೆ!"—ಹೀಗೆ ಇಬ್ಬರೂ ಶಾಲಾ ಮಕ್ಕಳಂತೆ ನಗುತ್ತಾ ತಮ್ಮ ತಮ್ಮ ದಾರಿ ಹಿಡಿದರು.
ಆದರೆ, ಜರತುಷ್ಟ್ರನು ಒಬ್ಬನೇ ಹೆಜ್ಜೆ ಹಾಕುತ್ತಾ, ತನ್ನ ಮನಸ್ಸಿನಲ್ಲಿ ಹೀಗೆ ಕೇಳಿಕೊಂಡನು: "ಇದು ಸಾಧ್ಯವೇ! ಈ ಕಾಡಿನಲ್ಲಿರುವ ವೃದ್ಧ ಸಂತನಿಗೆ ಇನ್ನೂ ತಿಳಿದಿಲ್ಲವೇ—ದೇವರು ಸತ್ತಿದ್ದಾನೆ ಎಂದು!"
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ