ಶನಿವಾರ, ಏಪ್ರಿಲ್ 4, 2026

ಪ್ರಸ್ತಾವನೆ - 1

ಶನಿವಾರ, ಏಪ್ರಿಲ್ 4, 2026
ಜರತುಷ್ಟ್ರನು ತನಗೆ ಮೂವತ್ತು ವರ್ಷ ವಯಸ್ಸಾಗಿದ್ದಾಗ, ತನ್ನ ಮನೆ ಮತ್ತು ಮನೆಯ ಸಮೀಪದ ಹೊಳೆಯನ್ನು ತೊರೆದು, ಬೆಟ್ಟಕ್ಕೆ ಹೋದನು. ಹತ್ತು ವರ್ಷಗಳ ಕಾಲ ಅಲ್ಲಿ ಅವನು ಕಿಂಚಿತ್ತೂ ಬೇಸರವಿಲ್ಲದೇ ತನ್ನ ಆತ್ಮವನ್ನು ಮತ್ತು ಏಕಾಂತವನ್ನು ಆನಂದಿಸಿದನು. ಆದರೆ ಕೊನೆಗೆ ಅವನ ಹೃದಯ ಬದಲಾಯಿತು. ಒಂದು ಮುಂಜಾನೆ ಎದ್ದು, ಸೂರ್ಯನ ಮುಂದೆ ನಿಂತು, ಹೀಗೆ ಹೇಳಿದನು:

"ಎಲೈ ಮಹಾನ್ ತಾರೆಯೇ! ನೀನು ಯಾರಿಗಾಗಿ ಬೆಳಕು ನೀಡುವೆಯೋ, ಅವರೇ ಇಲ್ಲದಿದ್ದರೆ ನಿನಗೆ ಸಂತೋಷವಾಗುತ್ತಿತ್ತೆ?

ಹತ್ತು ವರ್ಷಗಳಿಂದ, ನೀನು ನನ್ನ ಗುಹೆಯವರೆಗೆ ಹತ್ತಿ ಬಂದು ಜೊತೆ ನೀಡಿರುವೆ: ನಾನು, ನನ್ನ ಗರುಡ ಮತ್ತು ಸರ್ಪ ಇಲ್ಲದಿದ್ದರೆ, ನೀನು ನಿನ್ನ ಬೆಳಕಿನಿಂದ ಮತ್ತು ಪ್ರಯಾಣದಿಂದ ಬೇಸರಗೊಂಡಿರುತ್ತಿದ್ದೆ.

ಆದರೆ ನಾವು ಪ್ರತಿದಿನ ನಿನಗಾಗಿ ಕಾದಿದ್ದೆವು, ನಿನ್ನ ಬೆಳಕಿನ ಪ್ರಕಾಶತೆಯನ್ನು ಹೀರಿ ಆಶೀರ್ವದಿಸಿದೆವು.

ನೋಡು! ಅತಿ ಹೆಚ್ಚು ಜೇನು ಸಂಗ್ರಹಿಸಿದ ಜೇನುನೊಣದಂತೆ ನನ್ನ ಜ್ಞಾನದಿಂದ ನಾನು ದಣಿದಿದ್ದೇನೆ; ಅದನ್ನರಸುವ ಚಾಚಿದ ಕೈಗಳು ನನಗೆ ಬೇಕಾಗಿವೆ. ಅದನ್ನು ನಾನು ಜ್ಞಾನಿಗಳು ತಮ್ಮ ಮೂರ್ಖತನದಲ್ಲಿ ಸಂತೋಷ ಪಡುವವರೆಗೂ ಹಾಗೂ ಬಡವರು ಸಂಪತ್ತಿನೊಂದಿಗೆ ಜೀವಿಸುವವರೆಗೂ ಹಂಚಲು ಬಯಸುತ್ತೇನೆ.

ಹಾಗಾಗಿ ನಾನು ಆಳಕ್ಕೆ ಇಳಿಯಬೇಕಿದೆ. ಪ್ರತಿ ಸಂಜೆ ನೀನು ಸಮುದ್ರದ ಹಿಂದೆ ಇಳಿದು ಬೇರೊಂದು ಲೋಕಕ್ಕೆ ಬೆಳಕೀಯುವಂತೆ, ಎಲೈ ಉಲ್ಲಾಸಭರಿತ ನಕ್ಷತ್ರವೇ!

ನಿನ್ನಂತೆ ನಾನು ಕೆಳಗಿಳಿಯಲೇಬೇಕು. ನನಗಾಗಿ ಕಾದಿರುವ ಜನರಿಗಾಗಿ.

ನನ್ನನ್ನು ಹರಸು ಓ ಶಾಂತ ನೇತ್ರನೇ, ಅತಿಯಾದ ಸುಖವನ್ನೂ ಮತ್ಸರವಿಲ್ಲದೇ ನೋಡಬಲ್ಲವನೇ!

ತುಂಬಿ ಹರಿಯಲಿರುವ ಈ ಪಾತ್ರೆಯನ್ನು ಆಶೀರ್ವದಿಸು, ಅದರ ನೀರು ಬಂಗಾರದಂತೆ ಹರಿದು ಎಲ್ಲೆಡೆ ನಿನ್ನ ಆನಂದದ ಪ್ರತಿಬಿಂಬವನ್ನು ಹೊತ್ತುಕೊಂಡು ಸಾಗಲಿ!

ನೋಡು! ಈ ಪಾತ್ರೆಯು ಮತ್ತೆ ಖಾಲಿಯಾಗಲಿದೆ, ಮತ್ತು ಜರತುಷ್ಟ್ರನು ಮತ್ತೆ ಮನುಷ್ಯನಾಗಲಿದ್ದಾನೆ."

ಹೀಗೆ ಹೇಳುತ್ತಾ ಜರತುಷ್ಟ್ರನು ಬೆಟ್ಟದಿಂದ ಕೆಳಗಿಳಿಯುವ ಪ್ರಯಾಣ ಪ್ರಾರಂಭವಾಯಿತು.

0 ಕಾಮೆಂಟ್‌(ಗಳು):

ಕಾಮೆಂಟ್‌‌ ಪೋಸ್ಟ್‌ ಮಾಡಿ

 
ಜರಥುಷ್ಟ್ರನ ಉಪದೇಶಗಳು. Design by Pocket - Fixed by Blogger templates