ಭಾನುವಾರ, ಏಪ್ರಿಲ್ 26, 2026

22. ದಾನಶೀಲ ಸದ್ಗುಣ

ಭಾನುವಾರ, ಏಪ್ರಿಲ್ 26, 2026
(ಭಾಗ 1)

ಜರತುಷ್ಟ್ರನು ತನ್ನ ಹೃದಯಕ್ಕೆ ಹತ್ತಿರವಾಗಿದ್ದ "ಮಚ್ಚೆ ಹಸು" ಎಂಬ ಹೆಸರಿನ ಪಟ್ಟಣ ಬಿಟ್ಟು ಹೊರಟಾಗ, ಅವನನ್ನು ತಮ್ಮ ಗುರು ಎಂದು ಒಪ್ಪಿಕೊಂಡಿದ್ದ ಅನೇಕ ಜನರು ಅವನನ್ನು ಹಿಂಬಾಲಿಸಿದರು.

ಹೀಗೆ ಅವರು ಒಂದು ನಾಲ್ಕು ರಸ್ತೆಗಳು ಸಂಧಿಸುವ ಜಾಗಕ್ಕೆ ಬಂದರು. ಆಗ ಜರತುಷ್ಟ್ರನು ತಾನು ಇನ್ನು ಮುಂದೆ ಒಬ್ಬನೇ ಹೋಗಲು ಬಯಸುತ್ತೇನೆ ಎಂದು ಅವರಿಗೆ ಹೇಳಿದನು; ಏಕೆಂದರೆ ಅವನಿಗೆ ಏಕಾಂಗಿಯಾಗಿ ನಡೆಯುವುದೆಂದರೆ ಅತೀವ ಪ್ರೀತಿ.

ಆದರೆ ಅವನ ಶಿಷ್ಯರು ಒಂದು ದಂಡವನ್ನು ಕೋಲನ್ನು ಉಡುಗೊರೆಯಾಗಿ ನೀಡಿದ್ದರು. ಆ ಕೋಲಿನ ಚಿನ್ನದ ಹಿಡಿಕೆಯ ಮೇಲೆ ಒಂದು ಹಾವು ಸೂರ್ಯನ ಸುತ್ತಲೂ ಸುತ್ತಿಕೊಂಡಿತ್ತು. ಜರತುಷ್ಟ್ರನು ಆ ಕೋಲನ್ನು ನೋಡಿ ಸಂತೋಷಪಟ್ಟನು ಮತ್ತು ಅದನ್ನು ನೆಲದ ಮೇಲೆ ಊರಿ ನಿಂತು ತನ್ನ ಶಿಷ್ಯರಿಗೆ ಹೀಗೆ ಹೇಳಿದನು:

ನನಗೆ ಹೇಳಿ: ಚಿನ್ನಕ್ಕೆ ಇಷ್ಟೊಂದು ಉನ್ನತ ಮೌಲ್ಯ ಬಂದಿದ್ದು ಹೇಗೆ? ಏಕೆಂದರೆ ಅದು ಅಪರೂಪವಾದುದು, ಅದರಿಂದ ಯಾವುದೇ ನೇರ ಲಾಭವಿಲ್ಲ, ಅದು ಪ್ರಕಾಶಮಾನವಾದುದು ಮತ್ತು ಮೃದುವಾದ ಹೊಳಪನ್ನು ಹೊಂದಿದೆ; ಅದು ಯಾವಾಗಲೂ ತನ್ನನ್ನು ತಾನು ಅರ್ಪಿಸಿಕೊಳ್ಳುತ್ತದೆ.

ಅತ್ಯುನ್ನತ ಗುಣದ ಪ್ರತಿರೂಪವಾಗಿ ಚಿನ್ನಕ್ಕೆ ಈ ಮೌಲ್ಯ ಬಂದಿದೆ. ದಾನ ಮಾಡುವವನ ನೋಟವು ಚಿನ್ನದಂತೆ ಹೊಳೆಯುತ್ತದೆ. ಅದರ ಹೊಳಪು ಚಂದ್ರ ಮತ್ತು ಸೂರ್ಯನ ನಡುವೆ ಶಾಂತಿಯನ್ನು ಉಂಟುಮಾಡುತ್ತದೆ.

ಅತ್ಯುನ್ನತ ಗುಣವು ಅಪರೂಪವಾದುದು ಮತ್ತು ಲಾಭದ ಹಂಬಲವಿಲ್ಲದ್ದು, ಅದು ಪ್ರಕಾಶಮಾನವಾದುದು ಮತ್ತು ಮೃದುವಾದ ಹೊಳಪನ್ನು ಹೊಂದಿದೆ: 'ದಾನ ಮಾಡುವ ಗುಣವೇ' ಅತ್ಯುನ್ನತ ಗುಣವಾಗಿದೆ.

ನಿಜಕ್ಕೂ ನನ್ನ ಶಿಷ್ಯರೇ, ನೀವು ಕೂಡ ನನ್ನಂತೆಯೇ ಈ ದಾನ ಮಾಡುವ ಗುಣಕ್ಕಾಗಿ ಶ್ರಮಿಸುತ್ತಿದ್ದೀರಿ ಎಂದು ನನಗೆ ತಿಳಿದಿದೆ. ಬೆಕ್ಕುಗಳು ಮತ್ತು ತೋಳಗಳಂತಹ ಸ್ವಭಾವಕ್ಕೂ ನಿಮಗೂ ಏನು ಸಂಬಂಧ?

ನಿಮ್ಮನ್ನು ನೀವೇ ತ್ಯಾಗ ಮತ್ತು ಉಡುಗೊರೆಯಾಗಿ ನೀಡಿಕೊಳ್ಳಬೇಕೆಂಬ ಹಂಬಲ ನಿಮ್ಮಲ್ಲಿದೆ: ಆದ್ದರಿಂದಲೇ ನಿಮ್ಮ ಆತ್ಮದಲ್ಲಿ ಎಲ್ಲಾ ಸಂಪತ್ತನ್ನು ಸಂಗ್ರಹಿಸುವ ಭಯಕೆ ನಿಮಗಿದೆ.

ನಿಮ್ಮ ಆತ್ಮವು ನಿಧಿ ಮತ್ತು ರತ್ನಗಳಿಗಾಗಿ ತಣಿಯದ ಹಂಬಲ ಹೊಂದಿದೆ, ಏಕೆಂದರೆ ನಿಮ್ಮ ಗುಣವು ಇತರರಿಗೆ ನೀಡುವ ವಿಷಯದಲ್ಲಿ ತೃಪ್ತಿ ಹೊಂದಲಾರದು.

ಎಲ್ಲಾ ವಿಷಯಗಳು ನಿಮ್ಮ ಕಡೆಗೆ ಮತ್ತು ನಿಮ್ಮೊಳಗೆ ಹರಿಯುವಂತೆ ನೀವು ಮಾಡುತ್ತೀರಿ, ಏಕೆಂದರೆ ಅವು ನಿಮ್ಮೊಳಗಿನ ಚಿಲುಮೆಯಿಂದ ನಿಮ್ಮ ಪ್ರೀತಿಯ ಉಡುಗೊರೆಗಳಾಗಿ ಮರಳಿ ಹೊರಹರಿಯಲಿ ಎಂದು.

ನಿಜಕ್ಕೂ, ಅಂತಹ ದಾನ ಪ್ರವೃತ್ತಿಯ ಪ್ರೀತಿಯು ಎಲ್ಲಾ ಮೌಲ್ಯಗಳನ್ನು ತನ್ನದಾಗಿಸಿಕೊಳ್ಳಬೇಕು; ಆದರೆ ಇದನ್ನು ನಾನು "ಆರೋಗ್ಯಕರ ಮತ್ತು ಪವಿತ್ರವಾದ ಸ್ವಾರ್ಥ" ಎಂದು ಕರೆಯುತ್ತೇನೆ.

ಇನ್ನೊಂದು ರೀತಿಯ ಸ್ವಾರ್ಥವೂ ಇದೆ, ಅದು ಅತಿ ಬಡತನದಿಂದ ಕೂಡಿದ ಮತ್ತು ಹಸಿದ ಸ್ವಭಾವದ್ದು, ಅದು ಯಾವಾಗಲೂ ಕದಿಯಲು ಬಯಸುತ್ತದೆ—ಅದು ರೋಗಗ್ರಸ್ತ ಮನುಷ್ಯನ ಸ್ವಾರ್ಥ, ಅನಾರೋಗ್ಯಕರ ಸ್ವಾರ್ಥ.

ಕಳ್ಳನ ಕಣ್ಣಿನಿಂದ ಅದು ಹೊಳೆಯುವ ಎಲ್ಲವನ್ನೂ ನೋಡುತ್ತದೆ; ಹಸಿವಿನ ಹಂಬಲದಿಂದ ಅದು ಸಮೃದ್ಧಿಯಾಗಿರುವವನನ್ನು ಅಳೆಯುತ್ತದೆ; ಮತ್ತು ಅದು ಯಾವಾಗಲೂ ದಾನ ಮಾಡುವವರ ಮೇಜಿನ ಸುತ್ತಲೂ ಹೊಂಚು ಹಾಕುತ್ತಿರುತ್ತದೆ.

ಅಂತಹ ಹಂಬಲದಲ್ಲಿ ಅನಾರೋಗ್ಯ ಮತ್ತು ಅಗೋಚರವಾದ ಅವನತಿ ವ್ಯಕ್ತವಾಗುತ್ತದೆ; ಅಂತಹ ಕಳ್ಳತನದ ಸ್ವಭಾವವು ರೋಗಗ್ರಸ್ತ ದೇಹದ ಬಗ್ಗೆ ಮಾತನಾಡುತ್ತದೆ.

ನನ್ನ ಸಹೋದರನೇ ಹೇಳು, ನಮಗೆ ಎಲ್ಲಕ್ಕಿಂತ ಕೆಟ್ಟದ್ದು ಎಂದು ಅನ್ನಿಸುವುದು ಯಾವುದು? ಅದು 'ಅವನತಿ' ಅಲ್ಲವೇ? ದಾನ ಮಾಡುವ ಉದಾರ ಆತ್ಮವು ಇಲ್ಲದಿದ್ದಾಗ ನಾವು ಯಾವಾಗಲೂ ಅಲ್ಲಿ ಅವನತಿಯನ್ನು ಶಂಕಿಸುತ್ತೇವೆ.

ನಮ್ಮ ಪಯಣವು ಕೆಳಗಿನ ಹಂತದಿಂದ ಮೇಲಿನ ಹಂತದ ಕಡೆಗೆ ಸಾಗುತ್ತದೆ. ಆದರೆ "ಎಲ್ಲವೂ ನನಗಾಗಿ" ಎಂದು ಹೇಳುವ ಅವನತಿಯ ಭಾವನೆಯೆಂದರೆ ನಮಗೆ ಅಸಹ್ಯ.

ನಮ್ಮ ಭಾವನೆಗಳು ಮೇಲಕ್ಕೆ ಹಾರುತ್ತವೆ: ಇದು ನಮ್ಮ ದೇಹದ ಏಳಿಗೆಯ ಸಂಕೇತವಾಗಿದೆ. ಅಂತಹ ಏಳಿಗೆಯ ಸಂಕೇತಗಳನ್ನೇ ನಾವು 'ಸದ್ಗುಣಗಳು' ಎಂದು ಕರೆಯುತ್ತೇವೆ.

ಹೀಗೆ ಮನುಷ್ಯನ ದೇಹವು ಇತಿಹಾಸದ ಮೂಲಕ ಹೋರಾಡುತ್ತಾ ಬೆಳೆಯುತ್ತಾ ಸಾಗುತ್ತದೆ. ಮತ್ತು ಆತ್ಮ ಆ ದೇಹದ ಹೋರಾಟ ಮತ್ತು ವಿಜಯಗಳ ಸಾರಥಿ, ಅದರ ಸಂಗಾತಿ ಮತ್ತು ಅದರ ಪ್ರತಿಧ್ವನಿಯಾಗಿರುತ್ತದೆ.

ಒಳ್ಳೆಯದು ಮತ್ತು ಕೆಟ್ಟದ್ದು ಎಂಬ ಪ್ರತಿಯೊಂದು ಹೆಸರೂ ಕೇವಲ ರೂಪಕಗಳಷ್ಟೆ; ಅವು ಎಲ್ಲವನ್ನೂ ನೇರವಾಗಿ ಹೇಳುವುದಿಲ್ಲ, ಕೇವಲ ಸುಳಿವು ನೀಡುತ್ತವೆ. ಅವುಗಳಲ್ಲೇ ಜ್ಞಾನವನ್ನು ಹುಡುಕುವವನು ಮೂರ್ಖ.

ನನ್ನ ಸಹೋದರರೇ, ನಿಮ್ಮ ಆತ್ಮವು ರೂಪಕಗಳಲ್ಲಿ ಮಾತನಾಡಲು ಶುರು ಮಾಡಿದಾಗ ಆ ಕ್ಷಣವನ್ನು ಗಮನಿಸಿ: ಅಲ್ಲಿಯೇ ನಿಮ್ಮ ಸದ್ಗುಣದ ಮೂಲ ಅಡಗಿದೆ.

ಅಗ ನಿಮ್ಮ ದೇಹವು ಉನ್ನತ ಸ್ಥಿತಿಗೆ ಏರುತ್ತದೆ; ತನ್ನ ಆನಂದದಿಂದ ಅದು ಆತ್ಮವನ್ನು ಮೈಮರೆಯುವಂತೆ ಮಾಡುತ್ತದೆ; ಆಗ ಆತ್ಮವು ಸೃಷ್ಟಿಕರ್ತನಾಗಿ, ಮೌಲ್ಯಮಾಪಕನಾಗಿ, ಪ್ರೇಮಿಯಾಗಿ ಮತ್ತು ಎಲ್ಲರಿಗೂ ಒಳ್ಳೆಯದನ್ನು ಮಾಡುವವನಾಗಿ ಬದಲಾಗುತ್ತದೆ.

ನಿಮ್ಮ ಹೃದಯವು ನದಿಯಂತೆ ವಿಶಾಲವಾಗಿ ಹರಿಯುವಾಗ—ಅದು ಬಯಲು ಸೀಮೆಯ ಜನರಿಗೆ ಹರಕೆಯೂ ಆಗಬಹುದು ಅಥವಾ ಪ್ರವಾಹದ ಅಪಾಯವೂ ಆಗಬಹುದು—ಅಲ್ಲಿ ನಿಮ್ಮ ಸದ್ಗುಣದ ಮೂಲವಿದೆ.

ನೀವು ಪ್ರಶಂಸೆ ಮತ್ತು ದೂಷಣೆಯಗಳಿಗಿಂತ ಮೇಲೇರಿದಾಗ, ಮತ್ತು ನಿಮ್ಮ ಇಚ್ಛೆಯು ಒಬ್ಬ ಪ್ರೇಮಿಯ ಇಚ್ಛೆಯಂತೆ ಎಲ್ಲವನ್ನೂ ನಿಯಂತ್ರಿಸಲು ಬಯಸಿದಾಗ—ಅಲ್ಲಿ ನಿಮ್ಮ ಸದ್ಗುಣದ ಮೂಲವಿದೆ.

ನೀವು ಐಷಾರಾಮಿ ವಸ್ತುಗಳನ್ನು ಮತ್ತು ಸುಖಕರವಾದ ಹಾಸಿಗೆಯನ್ನು ದ್ವೇಷಿಸಿದಾಗ, ಮತ್ತು ಅಂತಹ ಅತಿಯಾದ ಸುಖದ ಜೀವನದಿಂದ ಎಷ್ಟು ಸಾಧ್ಯವೋ ಅಷ್ಟು ದೂರವಿದ್ದಾಗ—ಅಲ್ಲಿ ನಿಮ್ಮ ಸದ್ಗುಣದ ಮೂಲವಿದೆ.

ಯಾವಾಗ ನೀವು ದೃಢವಾದ ಒಂದೇ ಸಂಕಲ್ಪವನ್ನು ಹೊಂದಿರುತ್ತೀರೋ ಮತ್ತು ನಿಮ್ಮ ಪ್ರತಿಯೊಂದು ಅವಶ್ಯಕತೆಯನ್ನೂ ಪೂರೈಸಿಕೊಳ್ಳುವ ಛಲವನ್ನು ಹೊಂದಿರುತ್ತೀರೋ—ಅಲ್ಲಿ ನಿಮ್ಮ ಸದ್ಗುಣದ ಮೂಲವಿದೆ.

ನಿಜಕ್ಕೂ, ಇದು ಒಂದು ಹೊಸ ಒಳಿತು ಮತ್ತು ಕೆಡುಕು! ಇದು ಒಂದು ಹೊಸ ಆಳವಾದ ಧ್ವನಿ ಮತ್ತು ಹೊಸ ಬುಗ್ಗೆಯ ದನಿಯಾಗಿದೆ!

ಈ ಹೊಸ ಸದ್ಗುಣವೇ 'ಶಕ್ತಿ'; ಇದೊಂದು ಆಳುವ ಆಲೋಚನೆಯಾಗಿದೆ ಮತ್ತು ಅದರ ಸುತ್ತಲೂ ಒಂದು ಸೂಕ್ಷ್ಮವಾದ ಆತ್ಮವಿದೆ: ಇದು ಜ್ಞಾನವೆಂಬ ಹಾವು ಸುತ್ತುವರೆದಿರುವ ಒಂದು ಬಂಗಾರದ ಸೂರ್ಯನಿದ್ದಂತೆ.

(ಭಾಗ 2)

ಇಲ್ಲಿ ಜರತುಷ್ಟ್ರನು ಸ್ವಲ್ಪ ಕಾಲ ಮೌನವಹಿಸಿ, ತನ್ನ ಶಿಷ್ಯರನ್ನು ಪ್ರೀತಿಯಿಂದ ನೋಡಿದನು. ನಂತರ ಅವನು ತನ್ನ ಮಾತನ್ನು ಮುಂದುವರಿಸಿದನು—ಅವನ ದನಿಯಲ್ಲಿ ಈಗ ಬದಲಾವಣೆಯಿತ್ತು:

ನನ್ನ ಸಹೋದರರೇ, ನಿಮ್ಮ ಸದ್ಗುಣದ ಶಕ್ತಿಯೊಂದಿಗೆ ಈ ಭೂಮಿಗೆ ನಿಷ್ಠರಾಗಿರಿ! ನಿಮ್ಮ ದಾನಶೀಲ ಪ್ರೀತಿ ಮತ್ತು ಜ್ಞಾನವು ಈ ಭೂಮಿಯ ಅರ್ಥಕ್ಕೆ ಸಮರ್ಪಿತವಾಗಲಿ! ನಾನು ನಿಮ್ಮನ್ನು ಪ್ರಾರ್ಥಿಸುತ್ತೇನೆ ಮತ್ತು ಆಜ್ಞಾಪಿಸುತ್ತೇನೆ.

ನಿಮ್ಮ ಸದ್ಗುಣಗಳನ್ನು ಈ ಲೌಕಿಕ ಜಗತ್ತಿನಿಂದ ಹಾರಿಹೋಗಿ ಪರಲೋಕದ ಕಲ್ಪನೆಗಳಿಗೆ ತನ್ನ ರೆಕ್ಕೆಗಳನ್ನು ಬಡಿದುಕೊಳ್ಳದಿರಲಿ! ಅಯ್ಯೋ, ಇದುವರೆಗೆ ಎಷ್ಟೊಂದು ಸದ್ಗುಣಗಳು ಭೂಮಿಯಿಂದ ಹಾರಿಹೋಗಿವೆಯೋ!

ನನ್ನಂತೆಯೇ, ಹಾರಿಹೋದ ಆ ಸದ್ಗುಣವನ್ನು ಮರಳಿ ಈ ಭೂಮಿಗೆ ತನ್ನಿ—ಹೌದು, ಅದನ್ನು ಮರಳಿ ದೇಹ ಹಾಗೂ ಬದುಕಿನೆಡೆಗೆ ತನ್ನಿ: ಅದು ಭೂಮಿಗೆ ಅದರ ಅರ್ಥವನ್ನು, ಅಂದರೆ ಒಂದು 'ಮಾನವೀಯ ಅರ್ಥ'ವನ್ನು ನೀಡಲಿ!

ಇದುವರೆಗೆ ನೂರಾರು ಬಾರಿ ಮನುಷ್ಯನ ಚೇತನ ಮತ್ತು ಸದ್ಗುಣಗಳು ಈ ಲೋಕವನ್ನು ಬಿಟ್ಟು ಹಾರಿಹೋಗಿ ತಪ್ಪು ದಾರಿಯಲ್ಲಿ ನಡೆದಿವೆ. ಅಯ್ಯೋ! ಆ ಎಲ್ಲಾ ಭ್ರಮೆಗಳು ಮತ್ತು ತಪ್ಪುಗಳು ಇಂದಿಗೂ ನಮ್ಮ ದೇಹದಲ್ಲಿ ಅಡಗಿವೆ; ಅವು ನಮ್ಮ ದೇಹ ಮತ್ತು ಸಂಕಲ್ಪದ ಭಾಗವಾಗಿಹೋಗಿವೆ.

ಕೇವಲ ಸಾವಿರಾರು ವರ್ಷಗಳ ವಿವೇಕ ಮಾತ್ರವಲ್ಲ—ಅಂದಿನ ಹುಚ್ಚುತನವೂ ನಮ್ಮಲ್ಲಿ ಜೀವಂತವಾಗಿದೆ. ಅಂತಹ ಹಳೆಯ ಪರಂಪರೆಯನ್ನು ಹೊರುವುದು ಅಪಾಯಕಾರಿ.

ನಾವು ಈಗಲೂ 'ಬೃಹತ್ ಅವಕಾಶ' ಎಂಬ ದೈತ್ಯನೊಂದಿಗೆ ಹಂತ ಹಂತವಾಗಿ ಹೋರಾಡುತ್ತಿದ್ದೇವೆ; ಇಡೀ ಮಾನವಕುಲದ ಮೇಲೆ ಇದುವರೆಗೆ ಅಸಂಬದ್ಧತೆ ಮತ್ತು ಅರ್ಥಹೀನತೆಯೇ ರಾಜ್ಯಭಾರ ಮಾಡಿದೆ.

ನನ್ನ ಸಹೋದರರೇ, ನಿಮ್ಮ ಚೇತನ ಮತ್ತು ಸದ್ಗುಣಗಳು ಈ ಭೂಮಿಯ ಅರ್ಥಕ್ಕಾಗಿಯೇ ಸಮರ್ಪಿತವಾಗಲಿ: ಪ್ರತಿಯೊಂದರ ಮೌಲ್ಯವೂ ನಿಮ್ಮಿಂದ ಹೊಸದಾಗಿ ನಿರ್ಧರಿಸಲ್ಪಡಲಿ! ಅದಕ್ಕಾಗಿಯೇ ನೀವು ಹೋರಾಟಗಾರರಾಗಬೇಕು! ಅದಕ್ಕಾಗಿಯೇ ನೀವು ಸೃಷ್ಟಿಕರ್ತರಾಗಬೇಕು!

ಜ್ಞಾನದಿಂದ ದೇಹವು ಶುದ್ಧವಾಗುತ್ತದೆ; ಜ್ಞಾನದಿಂದ ಪ್ರಯತ್ನಿಸುವ ಮೂಲಕ ಅದು ಎತ್ತರಕ್ಕೆ ಏರುತ್ತದೆ; ತಿಳಿದವನಿಗೆ ಎಲ್ಲಾ ಪ್ರೇರಣೆಗಳು ಪವಿತ್ರವಾಗುತ್ತವೆ; ಎತ್ತರಕ್ಕೇರಿದವನಿಗೆ ಆತ್ಮ ಸಂತೋಷವಾಗುತ್ತದೆ.

ವೈದ್ಯನೇ, ಮೊದಲು ನಿನ್ನನ್ನು ನೀನೇ ಗುಣಪಡಿಸಿಕೊ: ಆಗ ಮಾತ್ರ ನೀನು ನಿನ್ನ ರೋಗಿಯನ್ನು ಗುಣಪಡಿಸಲು ಸಾಧ್ಯ. ತನ್ನನ್ನು ತಾನು ಪರಿಪೂರ್ಣಗೊಳಿಸಿಕೊಂಡವನನ್ನು ಕಣ್ಣಾರೆ ನೋಡುವುದೇ ರೋಗಿಗೆ ಸಿಗುವ ಅತ್ಯುತ್ತಮ ಚಿಕಿತ್ಸೆಯಾಗಲಿ.

ಯಾರೂ ತುಳಿಯದ ಸಾವಿರಾರು ಹಾದಿಗಳು ಇಲ್ಲಿವೆ; ಸಾವಿರಾರು ಆರೋಗ್ಯದಾಯಕ ತಾಣಗಳು ಮತ್ತು ಬದುಕಿನ ಅಡಗಿರುವ ದ್ವೀಪಗಳಿವೆ. ಮನುಷ್ಯ ಮತ್ತು ಮನುಷ್ಯನ ಜಗತ್ತು ಇಂದಿಗೂ ಬತ್ತಿಲ್ಲ ಮತ್ತು ಸಂಪೂರ್ಣವಾಗಿ ಪತ್ತೆಯಾಗಿಲ್ಲ.

ಜಾಗೃತರಾಗಿ ಮತ್ತು ಆಲಿಸಿ, ಓ ಏಕಾಂಗಿಗಳೇ! ಭವಿಷ್ಯದಿಂದ ಗಾಳಿಯು ರಹಸ್ಯ ರೆಕ್ಕೆಗಳೊಂದಿಗೆ ಬರುತ್ತಿದೆ, ಮತ್ತು ಸೂಕ್ಷ್ಮ ಕಿವಿಯುಳ್ಳವರಿಗೆ ಶುಭ ಸುದ್ದಿಯನ್ನು ಸಾರುತ್ತಿದೆ.

ಇಂದಿನ ಏಕಾಂಗಿಗಳೇ, ಸಮಾಜದಿಂದ ಬೇರ್ಪಟ್ಟವರೇ, ನೀವು ಒಂದು ದಿನ ದೊಡ್ಡ ಜನಾಂಗವಾಗುವಿರಿ: ತಮ್ಮನ್ನು ತಾವು ಆರಿಸಿಕೊಂಡ ನಿಮ್ಮಿಂದಲೇ ಒಂದು ಆಯ್ದ ಜನಸಮುದಾಯ ಉದಯಿಸುತ್ತದೆ:— ಮತ್ತು ಅದರಿಂದಲೇ 'ಅತಿಮಾನವ' ಜನ್ಮ ತಾಳುತ್ತಾನೆ.

ನಿಜಕ್ಕೂ, ಭೂಮಿಯು ಒಂದು ಆರೋಗ್ಯಧಾಮವಾಗಲಿದೆ! ಈಗಾಗಲೇ ಅದರ ಸುತ್ತಲೂ ಒಂದು ಹೊಸ ಸುಗಂಧ ಹರಡುತ್ತಿದೆ, ಅದು ಮುಕ್ತಿಯನ್ನು ತರುವ ಸುಗಂಧ—ಮತ್ತು ಒಂದು ಹೊಸ ಭರವಸೆ!

(ಭಾಗ 3)

ಜರತುಷ್ಟ್ರನು ಈ ಮಾತುಗಳನ್ನು ಹೇಳಿದ ನಂತರ, ಇನ್ನೂ ಏನೋ ಹೇಳಬೇಕಿತ್ತೇನೋ ಎಂಬಂತೆ ಸ್ವಲ್ಪ ಹೊತ್ತು ಮೌನವಾದನು; ಬಹಳ ಹೊತ್ತು ತನ್ನ ಕೈಯಲ್ಲಿದ್ದ ಆ ದಂಡವನ್ನು ಸಂಶಯದಿಂದಲೇ ಅತ್ತಿತ್ತ ತೂಗಾಡಿಸಿದನು. ಕೊನೆಗೆ ಅವನು ಮಾತನಾಡಿದನು—ಈಗ ಅವನ ದನಿ ಬದಲಾಗಿತ್ತು:

ನನ್ನ ಶಿಷ್ಯರೇ, ನಾನು ಈಗ ಏಕಾಂಗಿಯಾಗಿ ಹೋಗುತ್ತಿದ್ದೇನೆ! ನೀವು ಕೂಡ ಈಗ ಇಲ್ಲಿಂದ ಹೋಗಿ, ಮತ್ತು ನೀವೂ ಏಕಾಂಗಿಗಳಾಗಿಯೇ ಇರಿ! ಇದು ನನ್ನ ಇಚ್ಛೆ.

ನಿಜಕ್ಕೂ ನಾನು ನಿಮಗೆ ಸಲಹೆ ನೀಡುತ್ತಿದ್ದೇನೆ: ನನ್ನಿಂದ ದೂರ ಹೋಗಿ ಮತ್ತು ಜರತುಷ್ಟ್ರನ ವಿಷಯದಲ್ಲಿ ಎಚ್ಚರಿಕೆಯಿಂದಿರಿ! ಇನ್ನೂ ಉತ್ತಮವೆಂದರೆ: ನನ್ನ ಬಗ್ಗೆ ನಾಚಿಕೆಯಿರಲಿ! ಬಹುಶಃ ಅವನು ನಿಮ್ಮನ್ನು ವಂಚಿಸಿರಬಹುದು.

ಜ್ಞಾನಿಯಾದವನು ಕೇವಲ ತನ್ನ ಶತ್ರುಗಳನ್ನು ಪ್ರೀತಿಸುವುದು ಮಾತ್ರವಲ್ಲ, ತನ್ನ ಸ್ನೇಹಿತರನ್ನೂ ದ್ವೇಷಿಸುವ ಶಕ್ತಿ ಹೊಂದಿರಬೇಕು.

ಒಬ್ಬ ವಿದ್ಯಾರ್ಥಿಯು ಕೇವಲ ವಿದ್ಯಾರ್ಥಿಯಾಗಿಯೇ ಉಳಿದರೆ, ಅದು ಅವನು ತನ್ನ ಗುರುವಿಗೆ ಮಾಡುವ ಅಪಮಾನ. ನನ್ನ ಈ ಯಶಸ್ಸಿನ ಕಿರೀಟದಿಂದ ನೀವು ಹೂಗಳನ್ನು ಏಕೆ ಕಿತ್ತುಕೊಳ್ಳಬಾರದು?

ನೀವು ನನ್ನನ್ನು ಆರಾಧಿಸುತ್ತೀರಿ; ಆದರೆ ಒಂದು ದಿನ ನಿಮ್ಮ ಈ ಆರಾಧನೆ ಕುಸಿದು ಬಿದ್ದರೆ ಏನು ಮಾಡುವುದು? ನೆನಪಿಡಿ, ಕುಸಿದು ಬೀಳುವ ಆರಾಧ್ಯ ದೈವದ ವಿಗ್ರಹವೇ ನಿಮ್ಮನ್ನು ಜಜ್ಜಿ ಹಾಕಬಹುದು!

ನೀವು “ನಾವು ಜರಥುಷ್ಟ್ರನಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ” ಎಂದು ಹೇಳುವಿರಿ? ಆದರೆ ಜರಥುಷ್ಟ್ರನಲ್ಲಿ ಏನಿದೆ! ನೀವು ನನ್ನ ನಂಬಿಕಸ್ಥರು—ಆದರೆ ಎಲ್ಲಾ ನಂಬಿಕೆಗಳಲ್ಲಿ ಏನಿದೆ!

ನೀವಿನ್ನೂ ನಿಮ್ಮನ್ನು ಹುಡುಕಿಕೊಂಡಿಲ್ಲ; ಅಷ್ಟರಲ್ಲೇ ನಾನು ಸಿಕ್ಕಿಬಿಟ್ಟೆ. ಎಲ್ಲಾ ನಂಬಿಕಸ್ತರೂ ಹೀಗೆಯೇ ಮಾಡುತ್ತಾರೆ; ಆದ್ದರಿಂದಲೇ ಇಂತಹ ನಂಬಿಕೆಗೆ ಯಾವುದೇ ಬೆಲೆ ಇಲ್ಲ.

ಈಗ ನಾನು ನಿಮಗೆ ನನ್ನನ್ನು ಮರೆಯಲು ಮತ್ತು ನಿಮ್ಮನ್ನು ನೀವು ಕಂಡುಕೊಳ್ಳಲು ಹೇಳುತ್ತಿದ್ದೇನೆ; ಯಾವಾಗ ನೀವು ನನ್ನನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೀರೋ, ಆಗ ಮಾತ್ರ ನಾನು ನಿಮ್ಮ ಬಳಿಗೆ ಮರಳಿ ಬರುತ್ತೇನೆ.

ನಿಜಕ್ಕೂ ನನ್ನ ಸಹೋದರರೇ, ಅಂದು ನಾನು ನನ್ನ ಕಳೆದುಹೋದವರನ್ನು ಹೊಸ ಕಣ್ಣುಗಳಿಂದ ಹುಡುಕುತ್ತೇನೆ; ಅಂದು ನಾನು ನಿಮ್ಮನ್ನು ಬೇರೆಯದೇ ಆದ ಪ್ರೀತಿಯಿಂದ ಪ್ರೀತಿಸುತ್ತೇನೆ.

ಅಂದು ನೀವು ಮತ್ತೆ ನನಗೆ ಗೆಳೆಯರಾಗುವಿರಿ ಮತ್ತು ಒಂದೇ ಭರವಸೆಯ ಮಕ್ಕಳಾಗುವಿರಿ: ಆಗ ನಾನು ನಿಮ್ಮೊಂದಿಗೆ ಮೂರನೇ ಬಾರಿಗೆ ಸೇರುತ್ತೇನೆ, ನಿಮ್ಮೊಂದಿಗೆ "ಮಹಾ ಮಧ್ಯಾಹ್ನವನ್ನು" ಆಚರಿಸಲು.

ಅದು ಮಹಾ ಮಧ್ಯಾಹ್ನ, ಅಂದು ಮನುಷ್ಯನು ಪ್ರಾಣಿ ಮತ್ತು ಅತಿಮಾನವನ ನಡುವಿನ ಹಾದಿಯ ಮಧ್ಯದಲ್ಲಿರುತ್ತಾನೆ. ಅಂದು ಅವನು ತನ್ನ ಸಂಜೆಯ ಪಯಣವನ್ನೇ ಅತ್ಯಂತ ದೊಡ್ಡ ಭರವಸೆಯೆಂದು ಆಚರಿಸುತ್ತಾನೆ: ಏಕೆಂದರೆ ಅದು ಹೊಸ ಮುಂಜಾನೆಯೆಡೆಗಿನ ಪಯಣವಾಗಿರುತ್ತದೆ.

ಅಂತಹ ಸಮಯದಲ್ಲಿ, ಕುಸಿಯುವವನು ತನ್ನನ್ನು ತಾನೇ ಹರಸಿಕೊಳ್ಳುತ್ತಾನೆ, ಏಕೆಂದರೆ ಅವನು ಮೇಲೇರುವವನಾಗಿರುತ್ತಾನೆ; ಮತ್ತು ಅವನ ಜ್ಞಾನದ ಸೂರ್ಯ ಮಧ್ಯಾಹ್ನದ ನೆತ್ತಿಯ ಮೇಲಿರುತ್ತಾನೆ.

"ಎಲ್ಲಾ ದೇವರುಗಳೂ ಮರಣ ಹೊಂದಿದ್ದಾರೆ: ಈಗ ಅತಿಮಾನವನು ಹುಟ್ಟಿ ಬರಲಿ ಎಂದು ನಾವು ಬಯಸೋಣ."

—ಆ ಮಹಾ ಮಧ್ಯಾಹ್ನದಂದು ಇದೇ ನಮ್ಮ ಅಂತಿಮ ಸಂಕಲ್ಪವಾಗಿರಲಿ!

— ಹೀಗೆ ಹೇಳಿದನು ಜರತುಷ್ಟ್ರ.

0 ಕಾಮೆಂಟ್‌(ಗಳು):

ಕಾಮೆಂಟ್‌‌ ಪೋಸ್ಟ್‌ ಮಾಡಿ

 
ಜರಥುಷ್ಟ್ರನ ಉಪದೇಶಗಳು. Design by Pocket - Fixed by Blogger templates