ಅನೇಕರು ಅತಿ ತಡವಾಗಿ ಸಾಯುತ್ತಾರೆ, ಮತ್ತು ಕೆಲವರು ಅತಿ ಬೇಗನೆ ಸಾಯುತ್ತಾರೆ. ಆದರೆ "ಸರಿಯಾದ ಸಮಯದಲ್ಲಿ ಸಾಯಿರಿ!" ಎಂಬ ಉಪದೇಶ ವಿಚಿತ್ರವಾಗಿ ಕೇಳಿಸುತ್ತದೆ.
ಸರಿಯಾದ ಸಮಯದಲ್ಲಿ ಸಾಯುವುದನ್ನೇ ಜರತುಷ್ಟ್ರನು ಬೋಧಿಸುತ್ತಾನೆ.
ಯಾರು ಸರಿಯಾದ ಸಮಯದಲ್ಲಿ ಬದುಕುವುದೇ ಇಲ್ಲವೋ, ಅವರು ಸರಿಯಾದ ಸಮಯದಲ್ಲಿ ಸಾಯಲು ಹೇಗೆ ತಾನೇ ಸಾಧ್ಯ? ಅಂತಹವರು ಹುಟ್ಟಲೇಬಾರದಿತ್ತು!—ಅವಶ್ಯವಲ್ಲದ ಜನರಿಗೆ ನಾನು ಇದೇ ಸಲಹೆ ನೀಡುತ್ತೇನೆ.ಆದರೆ ಅವಶ್ಯವಲ್ಲದ ಜನರೂ ಸಹ ತಮ್ಮ ಮರಣವನ್ನು ಮಹತ್ವವೆಂದು ಪರಿಗಣಿಸುತ್ತಾರೆ; ಅತಿ ಖಾಲಿ ಬೀಜವೂ ಸಹ ಒಡೆಯಲು ಬಯಸುತ್ತದೆ.
ಪ್ರತಿಯೊಬ್ಬರೂ ಸಾಯುವುದನ್ನು ಒಂದು ಮಹತ್ವದ ವಿಷಯವೆಂದು ಪರಿಗಣಿಸುತ್ತಾರೆ: ಆದರೆ ಮರಣವು ಇದುವರೆಗೆ ಒಂದು 'ಹಬ್ಬ'ವಾಗಿಲ್ಲ. ಅತ್ಯಂತ ಸುಂದರವಾದ ಹಬ್ಬಗಳನ್ನು ಹೇಗೆ ಆಚರಿಸಬೇಕು ಎಂದು ಜನರು ಇನ್ನೂ ಕಲಿತಿಲ್ಲ.
ಪರಿಪೂರ್ಣತೆಯನ್ನು ತಲುಪಿದವನ ಮರಣವನ್ನು ನಾನು ನಿಮಗೆ ತೋರಿಸುತ್ತೇನೆ, ಅದು ಬದುಕಿರುವವರಿಗೆ ಒಂದು ಪ್ರೇರಣೆ ಮತ್ತು ಭರವಸೆಯಾಗುತ್ತದೆ.
ಅಂತಹವನು ತನ್ನ ವಿಜಯದ ಉತ್ತುಂಗದಲ್ಲಿ, ಭರವಸೆಯುಳ್ಳವರ ಮಧ್ಯೆ ಜಯಶಾಲಿಯಾಗಿ ಸಾಯುತ್ತಾನೆ.
ಹೀಗೆ ಸಾಯುವುದನ್ನು ಕಲಿಯಬೇಕು; ಮತ್ತು ಇಂತಹ ಮರಣವು ಜೀವಂತವಿರುವವರನ್ನು ಪ್ರೇರೇಪಿಸಬೇಕು.
ಹೀಗೆ ಸಾಯುವುದು ಶ್ರೇಷ್ಠ; ಎರಡನೆಯದು—ಯುದ್ಧದಲ್ಲಿ ಸಾಯುವುದು ಮತ್ತು ಮಹಾನ್ ಆತ್ಮವನ್ನು ಕಳೆಯುವುದು.
ಆದರೆ ಹೋರಾಟನಿರತನಿಂದಲೂ ವಿಜಯಶಾಲಿಯಿಂದಲೂ ಸಮಾನವಾಗಿ ದ್ವೇಶಿಸಲ್ಪಡುವಂತದ್ದು— ಮರಣ: ಅದು ಕಳ್ಳನಂತೆ ಬಂದು, ರಾಜನಂತೆ ವರ್ತಿಸುತ್ತದೆ.
ನನ್ನ ಮರಣವನ್ನು ನಾನು ನಿಮಗೆ ಪ್ರಶಂಸಿಸುತ್ತೇನೆ—ಅದು ಸ್ವಯಂಪ್ರೇರಿತ ಮರಣ, ಅದು ನನಗೆ ಬೇಕಾದಾಗ ಬರುತ್ತದೆ.
ಆದರೆ ನಾನು ಅದನ್ನು ಯಾವಾಗ ಬಯಸುತ್ತೇನೆ? ಗುರಿ ಮತ್ತು ಉತ್ತರಾಧಿಕಾರಿ ಇರುವವನು, ಸರಿಯಾದ ಸಮಯದಲ್ಲಿ ಮರಣವನ್ನು ಬಯಸುತ್ತಾನೆ.
ತನ್ನ ಗುರಿ ಮತ್ತು ಉತ್ತರಾಧಿಕಾರಿಯ ಗೌರವಕ್ಕಾಗಿ, ಅವನು ಜೀವನದ ಮಂದಿರದಲ್ಲಿ ಒಣ ಹೂಮಾಲೆಗಳನ್ನು ಹಾಕುವುದಿಲ್ಲ.
ನಾನು ಕಗ್ಗತ್ತಲಿನ ಕಲಾವಿದರಂತೆ ಇರಲು ಬಯಸುವುದಿಲ್ಲ: ಅವರು ತಮ್ಮ ಹಗ್ಗವನ್ನು ಉದ್ದಗೊಳಿಸುತ್ತಾರೆ, ಆದರೆ ಮುಂದೆ ಸಾಗುವುದಿಲ್ಲ.
ಎಷ್ಟೋ ಜನರು ತಮ್ಮ ಸತ್ಯಗಳು ಮತ್ತು ವಿಜಯಗಳಿಗಿಂತಲೂ ಹೆಚ್ಚು ವಯಸ್ಸಾದವರಾಗುತ್ತಾರೆ; ಹಲ್ಲುಗಳಿಲ್ಲದ ಬಾಯಿಗೆ ಎಲ್ಲಾ ಸತ್ಯಗಳನ್ನು ಹೇಳುವ ಹಕ್ಕಿರುವುದಿಲ್ಲ.
ಯಾರು ಕೀರ್ತಿ ಪಡೆಯಲು ಬಯಸುತ್ತಾರೋ, ಅವರು ಗೌರವವಿರುವಾಗಲೇ ವಿದಾಯ ಹೇಳಬೇಕು ಮತ್ತು ಸರಿಯಾದ ಸಮಯದಲ್ಲಿ ಹೊರಡುವ ಕಠಿಣ ಕಲೆಯನ್ನು ಅಭ್ಯಾಸ ಮಾಡಬೇಕು. ಒಬ್ಬ ವ್ಯಕ್ತಿಯು ತನ್ನ ರುಚಿ ಹೆಚ್ಚಿರುವಾಗಲೇ ಔತಣವನ್ನು ನಿಲ್ಲಿಸಬೇಕು.
ಕೆಲವು ಕಹಿ ಸೇಬುಗಳಿರುತ್ತವೆ, ಅವು ಶರದೃತುವಿನ ಕೊನೆಯವರೆಗೂ ಕಾಯುತ್ತವೆ: ಕೊನೆಗೆ ಅವು ಹಣ್ಣಾದಾಗ ಹಳದಿಯಾಗಿ ಮುದುಡಿ ಹೋಗಿರುತ್ತವೆ.
ತುಂಬಾ ಜನರು ಅತಿಯಾಗಿ ಬದುಕುತ್ತಾರೆ ಮತ್ತು ಅತಿ ದೀರ್ಘಕಾಲ ರೆಂಬೆಗಳಿಗೆ ಅಂಟಿಕೊಂಡಿರುತ್ತಾರೆ. ಈ ಮರದ ಮೇಲಿರುವ ಕೊಳೆತ ಮತ್ತು ಹುಳು ಹಿಡಿದ ಹಣ್ಣುಗಳನ್ನು ಉದುರಿಸಲು ಒಂದು ಚಂಡಮಾರುತ ಬರಬಾರದೇ!
ವೇಗದ ಮರಣವನ್ನು ಉಪದೇಶಿಸುವವರು ಬರಲಿ! ಅವರು ಜೀವನದ ಮರಗಳನ್ನು ಕದಲಿಸುವ ಬಿರುಗಾಳಿಯಾಗುತ್ತಾರೆ. ಆದರೆ ನಾನು ಕೇಳುವುದು ನಿಧಾನ ಮರಣದ ಉಪದೇಶ ಮಾತ್ರ.
ನೀವು “ಭೂಮಿಯೊಂದಿಗೆ ಸಹನೆ” ಎಂದು ಉಪದೇಶಿಸುತ್ತೀರಿ—ಆದರೆ ಭೂಮಿಯೇ ನಿಮ್ಮೊಂದಿಗೆ ಹೆಚ್ಚು ಸಹನೆ ಹೊಂದಿದೆ!
ನಿಜವಾಗಿ, ನಿಧಾನ ಮರಣವನ್ನು ಬೋಧಿಸುವವರು ಗೌರವಿಸುವ ಆ ಹೀಬ್ರೂ ವ್ಯಕ್ತಿ ಯೇಸು ಕ್ರಿಸ್ತ ತುಂಬ ಬೇಗ ಸತ್ತನು; ಅವನು ತುಂಬ ಬೇಗ ಸತ್ತದ್ದರಿಂದ ಹಲವರಿಗೆ ಅದು ಅನರ್ಥವಾಗಿ ಪರಿಣಮಿಸಿದೆ.
ಒಂದು ವೇಳೆ ಅವನು ಅರಣ್ಯದಲ್ಲಿಯೇ ಉಳಿದಿದ್ದರೆ ಮತ್ತು ಈ ಸಜ್ಜನರಿಂದ ದೂರವಿದ್ದಿದ್ದರೆ! ಆಗ ಬಹುಶಃ ಅವನು ಬದುಕುವುದನ್ನು, ಭೂಮಿಯನ್ನು ಪ್ರೀತಿಸುವುದನ್ನು ಮತ್ತು ನಗುವುದನ್ನು ಕಲಿಯುತ್ತಿದ್ದನೇನೋ!
ನನ್ನ ಸಹೋದರರೇ, ಇದನ್ನು ನಂಬಿ! ಅವನು ಅತಿ ಬೇಗ ಸತ್ತನು; ಅವನು ನನ್ನ ವಯಸ್ಸಿಗೆ ಬಂದಿದ್ದರೆ ತನ್ನ ಬೋಧನೆಗಳನ್ನು ಅವನೇ ನಿರಾಕರಿಸುತ್ತಿದ್ದನು! ಅಂತಹ ನಿರಾಕರಣೆ ಮಾಡುವಷ್ಟು ಉದಾತ್ತತೆ ಅವನಲ್ಲಿತ್ತು!
ಒಬ್ಬ ಯುವಕನಿಗಿಂತ ಪ್ರೌಢ ಮನುಷ್ಯನಲ್ಲಿ ಮಗುವಿನ ಗುಣ ಹೆಚ್ಚಿರುತ್ತದೆ ಮತ್ತು ವಿಷಾದ ಕಡಿಮೆ ಇರುತ್ತದೆ: ಅವನು ಬದುಕು ಮತ್ತು ಸಾವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾನೆ. ಸಾವಿನ ಬಗ್ಗೆ ಸ್ವತಂತ್ರನಾಗುವುದು ಮತ್ತು ಸಾವಿನಲ್ಲೂ ಸ್ವತಂತ್ರನಾಗಿರುವುದು; ಯಾವಾಗ 'ಹೌದು' ಎನ್ನಲು ಸಮಯವಿರುವುದಿಲ್ಲವೋ ಆಗ ಪವಿತ್ರವಾಗಿ 'ಇಲ್ಲ' ಎನ್ನುವುದನ್ನು ಅವನು ಬಲ್ಲನು.
ನೀವು ಸಾಯುವಾಗ ನಿಮ್ಮ ಚೇತನ ಮತ್ತು ಸದ್ಗುಣವು ಮುಸ್ಸಂಜೆಯ ಹೊಳಪಿನಂತೆ ಭೂಮಿಯ ಮೇಲೆ ಪ್ರಕಾಶಿಸಬೇಕು: ಇಲ್ಲದಿದ್ದರೆ ನಿಮ್ಮ ಮರಣವು ತೃಪ್ತಿದಾಯಕವಾಗಿಲ್ಲ ಎಂದರ್ಥ.
ನಾನು ಕೂಡ ಹಾಗೆಯೇ ಸಾಯುತ್ತೇನೆ, ನನ್ನ ಗೆಳೆಯರು ನನಗಾಗಿ ಈ ಭೂಮಿಯನ್ನು ಇನ್ನಷ್ಟು ಪ್ರೀತಿಸುವಂತಾಗಲಿ; ನನ್ನನ್ನು ಹೊತ್ತ ಈ ಭೂಮಿಯಲ್ಲಿ ವಿಶ್ರಾಂತಿ ಪಡೆಯಲು ನಾನು ಮತ್ತೆ ಮಣ್ಣಾಗುತ್ತೇನೆ.
ನಿಜಕ್ಕೂ, ಜರತುಷ್ಟ್ರನಿಗೊಂದು ಗುರಿಯಿತ್ತು; ಅವನು ತನ್ನ ಚೆಂಡನ್ನು ಎಸೆದನು. ಈಗ ನನ್ನ ಗೆಳೆಯರೇ, ನೀವು ನನ್ನ ಗುರಿಯ ಉತ್ತರಾಧಿಕಾರಿಗಳಾಗಿ; ಆ ಚಿನ್ನದ ಚೆಂಡನ್ನು ನಾನು ಈಗ ನಿಮಗೆ ಎಸೆಯುತ್ತಿದ್ದೇನೆ.
ಹೀಗೆ ಹೇಳಿದನು ಜರತುಷ್ಟ್ರ.
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ