ನಮ್ಮಲ್ಲಿ ಭಯ ಹುಟ್ಟಿಸುವುದು ಎತ್ತರವಲ್ಲ, ಬದಲಾಗಿ ಕೆಳಗಿನ ಕಡಿದಾದ ಇಳಿಜಾರು.
ಆ ಇಳಿಜಾರಿನಲ್ಲಿ, ಎಲ್ಲಿ ದೃಷ್ಟಿಯು ಕೆಳಮುಖವಾಗಿ ಧಾವಿಸುತ್ತದೆಯೋ ಮತ್ತು ಕೈ ಮೇಲ್ಮುಖವಾಗಿ ಹಿಡಿಯಲು ಯತ್ನಿಸುತ್ತದೆಯೋ, ಈ ಎರಡು ವೈರುದ್ಯ ಇಚ್ಛೆಗಳ ಕಾರಣದಿಂದ ಹೃದಯಕ್ಕೆ ತಲೆಸುತ್ತುವಂತಾಗುತ್ತದೆ.
ಓ ಸ್ನೇಹಿತರೇ, ನೀವೂ ಸಹ ನನ್ನ ಹೃದಯದಲ್ಲಿನ ಈ ವೈರುದ್ಯ ಇಚ್ಛೆಗಳನ್ನು ಊಹಿಸಬಲ್ಲಿರಾ?
ಇದೇ ನನ್ನ ಇಳಿಜಾರು ಮತ್ತು ನನ್ನ ಆಪತ್ತು: ನನ್ನ ದೃಷ್ಟಿ ಶಿಖರದ ಕಡೆಗೆ ನೆಟ್ಟಿದ್ದರೂ, ನನ್ನ ಕೈ ಇಳಿಜಾರಿನ ಕೆಳಗಿನ ಆಳವನ್ನು ಹಿಡಿಯಲು ಹಂಬಲಿಸುತ್ತದೆ.
ನನ್ನ ಇಚ್ಛೆ ಮಾನವನೊಂದಿಗೆ ಹೊಂದಿಕೊಂಡಿದೆ. ನಾನು ನನ್ನನ್ನು ಮಾನವನೊಂದಿಗೆ ಸರಪಳಿಗಳಿಂದ ಕಟ್ಟಿಕೊಂಡಿದ್ದೇನೆ, ಏಕೆಂದರೆ ನನ್ನೊಳಗಿನ ಮತ್ತೊಂದು ಇಚ್ಛೆ ನನ್ನನ್ನು ಮೇಲಕ್ಕೆ, ಅಂದರೆ ಅತಿಮಾನವನ ಕಡೆಗೆ ಎಳೆಯುತ್ತದೆ.
ನಾನು ಮಾನವನ ಸ್ಥಿರತೆಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಬಾರದು ಎಂಬ ಕಾರಣಕ್ಕಾಗಿಯೇ, ಮಾನವರ ನಡುವೆ, ಅರಿಯದವನಂತೆ ಕುರುಡನಾಗಿ ಬದುಕುತ್ತೇನೆ.
ಮಾನವರೇ, ನನಗೆ ನಿಮ್ಮ ಬಗ್ಗೆ ತಿಳುವಳಿಕೆ ಇಲ್ಲ. ಈ ಭಾವನೆ ನನ್ನ ಪಾಲಿನ ದುಃಖವೂ ಹೌದು ಮತ್ತು ನೆಮ್ಮದಿಯೂ ಹೌದು.
ಪ್ರತಿಯೊಬ್ಬ ವಂಚಕನಿಗಾಗಿ ನಾನು ಹೆಬ್ಬಾಗಿಲಿನಲ್ಲಿ ಕಾದುಕುಳಿತು,ಯಾರು ನನ್ನನ್ನು ವಂಚಿಸಲು ಬಯಸುತ್ತಾರೆ ಎಂದು ಕೇಳುತ್ತೇನೆ.
ನನ್ನ ಮೊದಲ ಪುರುಷೋಚಿತ ಜ್ಞಾನವೆಂದರೆ, ನಾನು ನನ್ನನ್ನು ವಂಚನೆಗೊಳಗಾಗಲು ಅನುವು ಮಾಡಿಕೊಡುತ್ತೇನೆ, ಹೀಗಾಗಿ ಮೋಸಗಾರರ ವಿರುದ್ಧ ಸದಾ ಜಾಗರೂಕನಾಗಿರಬೇಕಾದ ಅವಶ್ಯಕತೆಯಿಲ್ಲ.
ನಾನು ಸದಾ ಜನರ ವಿರುದ್ಧ ಎಚ್ಚರಿಕೆಯಿಂದ ಇದ್ದರೆ, ಮಾನವ ಕುಲದೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗುವುದಿಲ್ಲ, ಏಕೆಂದರೆ ನಾನು ಸುಲಭವಾಗಿ ಮೇಲಕ್ಕೆ ಎಳೆಯಲ್ಪಟ್ಟು ದೂರವಾಗುತ್ತೇನೆ.
ನಾನು ಹೆಚ್ಚು ಮುನ್ನೆಚ್ಚರಿಕೆ ಇಲ್ಲದೆ ಬದುಕಬೇಕು ಎಂಬುದೇ ನನ್ನ ವಿಧಿ.
ಮಾನವರ ನಡುವೆ ದುಃಖವಿಲ್ಲದೆ ಬದುಕಲು, ಎಲ್ಲ ವಿಧವಾದ ಪರಿಸ್ಥಿತಿಗಳನ್ನು ಸ್ವೀಕರಿಸಲು ಕಲಿಯಬೇಕು, ಅಗತ್ಯವಿದ್ದರೆ ಅಶುದ್ಧವಾದ ವಿಷಯಗಳಿಂದ ಸ್ವಯಂ ಶುದ್ಧಗೊಳಿಸಿಕೊಳ್ಳಲು ತಿಳಿದಿರಬೇಕು.
ನಾನು ಹಲವಾರು ಬಾರಿ ನನ್ನ ಹೃದಯಕ್ಕೆ ಹೇಳಿಕೊಳ್ಳುತ್ತೇನೆ: “ಧೈರ್ಯ ತಂದುಕೊ, ಹಳೆಯ ಹೃದಯವೇ. ಒಂದು ಅನಾಹುತ ನಿನಗೆ ಸಂಭವಿಸದಿದ್ದರೆ ಅದನ್ನೇ ಸಂತೋಷವೆಂದು ಪರಿಗಣಿಸು.”
ನನ್ನ ಎರಡನೇ ಜ್ಞಾನವೆಂದರೆ, ನಾನು ಹೆಮ್ಮೆಯುಳ್ಳವರಿಗಿಂತ ಹೆಚ್ಚಾಗಿ ಅಹಂಭಾವ ಹೊಂದಿದವರೆಡೆಗೆ ಸಹನೆ ಹೊಂದಿದ್ದೇನೆ.
ಗಾಯಗೊಂಡ ಅಹಂಭಾವವು ಅನೇಕ ದುರಂತಗಳ ಮೂಲ. ಆದರೆ ಗಾಯಗೊಂಡ ಹೆಮ್ಮೆ ಬಹಳ ಸಲ ಉತ್ತಮವಾಗಿ ಬೆಳೆಯುತ್ತದೆ.
ಜೀವನ ಸುಂದರವಾಗಿರಲು ಅದರ ಆಟವನ್ನು ಉತ್ತಮವಾಗಿ ಆಡಬೇಕು, ಆ ಉದ್ದೇಶಕ್ಕಾಗಿ ಉತ್ತಮ ನಟರ ಅಗತ್ಯವಿದೆ.
ಅಹಂಭಾವದವರು ಉತ್ತಮ ನಟರು ಎಂಬುದನ್ನು ನಾನು ಕಂಡಿದ್ದೇನೆ; ಅವರು ಕಾಣಿಸಿಕೊಳ್ಳಲು ಮತ್ತು ಇತರರಿಂದ ಮೆಚ್ಚುಗೆ ಪಡೆಯಲು ಬಯಸುತ್ತಾರೆ. ಅವರ ಇಡೀ ಚೇತನವು ಈ ಬಯಕೆಯಲ್ಲೇ ಇದೆ.
ಅವರು ತಮ್ಮನ್ನು ತಾವು ಪ್ರತಿನಿಧಿಸುತ್ತಾರೆ, ತಮ್ಮನ್ನು ತಾವು ಆವಿಷ್ಕರಿಸಿಕೊಳ್ಳುತ್ತಾರೆ; ಅವರ ನೆರಹೊರೆಯಲ್ಲಿ ನಾನು ಜೀವನವನ್ನು ನೋಡಲು ಇಷ್ಟಪಡುತ್ತೇನೆ—ಅದು ವಿಷಾದವನ್ನು ಗುಣಪಡಿಸುತ್ತದೆ.
ಆದ್ದರಿಂದ ನಾನು ಅಹಂಭಾವದವರನ್ನು ನಾನು ಸಹಿಸಿಕೊಳ್ಳುತ್ತೇನೆ, ಏಕೆಂದರೆ ಅವರು ನನಗೆ ಮಾನವ ಕುಲದೊಂದಿಗಿನ ಕೊಂಡಿಯಾಗಿದ್ದಾರೆ ಮತ್ತು ನನ್ನ ದುಃಖಕ್ಕೆ ಔಷಧದಂತೆ ಕೆಲಸ ಮಾಡುತ್ತಾರೆ.
ಅಹಂಭಾವದವರಲ್ಲಿಯೂ ಆಳವಾದ ವಿನಯವಿದೆ. ನಾನು ಅವರ ವಿನಮ್ರತೆಯ ಕಾರಣದಿಂದಾಗಿ ಅವರಿಗೆ ಪೂರಕವಾಗಿದ್ದೇನೆ ಮತ್ತು ಅವರೆಡೆಗೆ ಸಹಾನುಭೂತಿ ಹೊಂದಿದ್ದೇನೆ.
ಅವರು ತಮ್ಮನ್ನು ನಂಬಿಕೊಳ್ಳಲು ಇತರರ ಮೆಚ್ಚುಗೆಯ ಮೇಲೆ ಅವಲಂಬಿತರಾಗಿರುತ್ತಾರೆ. ಅವರು ನಿಮ್ಮ ನೋಟಗಳಿಗಾಗಿ ಹಾಗೂ ಹೊಗಳಿಕೆಗಳಿಗಾಗಿ ಹಂಬಲಿಸುತ್ತಾರೆ.
ನೀವು ಅವರ ಬಗ್ಗೆ ಒಳ್ಳೆಯ ರೀತಿಯಲ್ಲಿ ಸುಳ್ಳು ಹೇಳಿದರೂ ಅವರು ಅದನ್ನು ನಂಬುತ್ತಾರೆ. ಏಕೆಂದರೆ ಅವನ ಹೃದಯದ ಆಳದಲ್ಲಿ ಒಂದು ನಿಟ್ಟುಸಿರು ಕೇಳಿಸುತ್ತದೆ: “ನಾನು ಯಾರು?”
ಮತ್ತು ತನ್ನ ಬಗ್ಗೆ ತಾನೇ ಅರಿವಿಲ್ಲದಿರುವುದೇ ನಿಜವಾದ ಸದ್ಗುಣವಾಗಿದ್ದರೆ— ಹೊಗಳಿಕೆಗೆ ಹಂಬಲಿಸುವ ಅಹಂಭಾವದವರಿಗೂ ತನ್ನ ವಿನಯದ ಅರಿವು ಇರುವುದಿಲ್ಲ!
ಇದು ನನ್ನ ಮೂರನೇ ಪುರುಷೋಚಿತ ಜ್ಞಾನ: ನೀವು ಭಯಪಡುವುದರಿಂದ ನಾನು ದುಷ್ಟರ ಬಗ್ಗೆ ಇರುವ ನನ್ನ ಮೆಚ್ಚುಗೆಯನ್ನು ಕಳೆದುಕೊಳ್ಳುವುದಿಲ್ಲ.
ಪ್ರಕೃತಿಯಲ್ಲಿ ಉಷ್ಣತೆ ಮತ್ತು ಸೂರ್ಯನ ಪ್ರಕಾಶದಿಂದ ಹುಟ್ಟುವ ಅನೇಕ ಸುಂದರ ಮತ್ತು ವಿಚಿತ್ರ ಜೀವಿಗಳಿವೆ. ಹಾಗೆಯೇ ಮಾನವರಲ್ಲಿಯೂ ಬೆಚ್ಚಗಿನ ಸೂರ್ಯನ ಸುಂದರ ಸಂತಾನವಿದೆ; ದುಷ್ಟರಲ್ಲಿಯೂ ಅದ್ಭುತವಾದುದು ಬಹಳಷ್ಟಿದೆ.
ಮಾನವನ ದುಷ್ಟತನ ಹೇಳಿಕೊಳ್ಳುವಷ್ಟೇನೂ ದೊಡ್ಡದಲ್ಲ. ಅನೇಕ ದುಷ್ಟ ಕಾರ್ಯಗಳು ಸಣ್ಣವು ಮತ್ತು ತಾತ್ಕಾಲಿಕವಾದವೂ ಆಗಿವೆ.
ಭವಿಷ್ಯದಲ್ಲಿ ಪ್ರಕೃತಿಯಲ್ಲಿನ ಬಲಿಷ್ಠ ಪ್ರಾಣಿಗಳಂತೆ ಇನ್ನೂ ಶಕ್ತಿಶಾಲಿ ದುಷ್ಟ ರೂಪಗಳು ಬೆಳೆಯಬಹುದು.
ನೀವು ಇಂದು ದುಷ್ಟತನವೆಂದು ಕರೆಯುವ ವಿಚಾರವೂ ಸಹ ಸಹಜ ಬೆಳವಣಿಗೆ ಮತ್ತು ಬದಲಾವಣೆಯ ಭಾಗವಾಗಿರಬಹುದು.
ಉತ್ತಮ ಜನರು ಅಸುರರಂತಹ ದುಷ್ಟ ವಿಷಯಗಳಿಗೆ ಭಯಪಡುವುದು ಸಹ, ಅವರು ಅವುಗಳ ಮಹತ್ವವನ್ನು ಅರ್ಥಮಾಡಿಕೊಳ್ಳದ ಕಾರಣ.
ನಿಮ್ಮಲ್ಲಿನ ಅತ್ಯಂತ ಜ್ಞಾನಿಗಳೂ ಕೂಡ ಅತಿಮಾನವನನ್ನು ಭಯದೊಂದಿಗೆ ದುಷ್ಟನೆಂದು ಕರೆಯುವಿರಿ.
ನಾನು ಅತ್ಯುತ್ತಮ ಮಾನವರಿಂದಲೂ ಬೇಸರಗೊಂಡಿದ್ದೇನೆ, ಏಕೆಂದರೆ ನಾನು ಅವರಿಗಿಂತ ಮೇಲಿನ ಅತಿಮಾನವನಿಗಾಗಿ ಹಂಬಲಿಸುತ್ತೇನೆ.
ಅತ್ಯುತ್ತಮ ಜನರನ್ನು ಮುಖವಾಡವಿಲ್ಲದೆ ನೋಡಿದಾಗ ನನಗೆ ಭಯವಾಯಿತು ಮತ್ತು ನಾನು ಭವಿಷ್ಯದೊಳಗೆ ತಪ್ಪಿಸಿಕೊಳ್ಳಲು ಬಯಸಿದೆ.
ದೇವರುಗಳು ಸಹ ಬಟ್ಟೆಯುಡಲು ನಾಚಿಕೊಳ್ಳುವಷ್ಟು ದೂರದ ಭವಿಷ್ಯದೊಳಗೆ ಹೋಗಲು ಬಯಸುತ್ತೇನೆ.
ಆದರೆ ನಿಮ್ಮ ನಡುವೆ ನಾನು ಮುಖವಾಡ ಧರಿಸಿಯೇ ಕುಳಿತುಕೊಳ್ಳುತ್ತೇನೆ, ಈ ರೀತಿಯಲ್ಲಿ ನಾನು ನಿಮ್ಮನ್ನೂ ನನ್ನನ್ನೂ ಇಬ್ಬರನ್ನೂ ಗೊಂದಲಕ್ಕೀಡು ಮಾಡಬಹುದು. ಇದೇ ನನ್ನ ಕೊನೆಯ ಪುರುಷೋಚಿತ ಜ್ಞಾನ.
ಹೀಗೆ ಜರತುಷ್ಟ್ರನು ನುಡಿದನು.
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ