ಗುರುವಾರ, ಜೂನ್ 11, 2026

39. ಕವಿಗಳು

ಗುರುವಾರ, ಜೂನ್ 11, 2026
“ನಾನು ದೇಹವನ್ನು ಹೆಚ್ಚಾಗಿ ಅರಿತ ನಂತರ,” ಎಂದು ಜರಥುಷ್ಟ್ರನು ತನ್ನ ಶಿಷ್ಯನೊಂದಿಗೆ ಮಾತು ಶುರು ಮಾಡಿದನು, “ಆತ್ಮವು ನನಗೆ ಮತ್ಯಾವುದೋ ಆಳವಾದ ವಸ್ತುವಿನ ಸಂಕೇತವಾಗಿ ಮಾತ್ರ ಕಾಣುತ್ತದೆ; ಮತ್ತು ‘ಅವಿನಾಶಿ’ ಎಂದು ಕರೆಯಲ್ಪಡುವ ಎಲ್ಲವೂ ಕೇವಲ ಒಂದು ಹೊಲಿಕೆಯಷ್ಟೇ.”

“ನಾನು ಈ ಮೊದಲೇ ಈ ಮಾತನ್ನು ನಿಮ್ಮಿಂದ ಕೇಳಿದ್ದೇನೆ,” ಎಂದು ಶಿಷ್ಯನು ಉತ್ತರಿಸಿದನು, “ಮತ್ತು ಆಗ ನೀವು ‘ಆದರೆ ಕವಿಗಳು ಅತಿಯಾಗಿ ಸುಳ್ಳು ಹೇಳುತ್ತಾರೆ’ ಎಂದು ಹೇಳಿದ್ದಿರಿ. ಕವಿಗಳು ತುಂಬಾ ಸುಳ್ಳು ಹೇಳುತ್ತಾರೆ ಎಂದು ನೀವು ಯಾಕೆ ಹೇಳಿದಿರಿ?”

“ಏಕೆ?” ಎಂದು ಜರಥುಷ್ಟ್ರನು ಹೇಳಿದನು. “ನೀನು ಯಾಕೆ ಎಂದು ಕೇಳುವೆ? ಆದರೆ 'ಏಕೆ' ಎಂಬ ಪ್ರಶ್ನೆಗೆ ಉತ್ತರಿಸಬೇಕಾದವರ ಗುಂಪಿಗೆ ನಾನು ಸೇರಿದವನಲ್ಲ.”

“ನನ್ನ ಅನುಭವವೇನಾದರೂ ನಿನ್ನೆಯದೇ? ನನ್ನ ಅಭಿಪ್ರಾಯಗಳ ಕಾರಣಗಳನ್ನು ನಾನು ಬಹಳ ಹಿಂದೆಯೇ ಅನುಭವಿಸಿದ್ದೇನೆ.”

“ನನ್ನ ಎಲ್ಲಾ ಕಾರಣಗಳನ್ನೂ ಯಾವಾಗಲೂ ನನ್ನೊಡನೆ ಹೊತ್ತುಕೊಂಡು ತಿರುಗಬೇಕಾದರೆ, ನಾನು ನೆನಪುಗಳಿಂದ ತುಂಬಿದ ಒಂದು ದೊಡ್ಡ ಪೀಪಾಯಿಯಾಗಬೇಕಾಗುತ್ತಿರಲಿಲ್ಲವೇ?”

“ನನ್ನ ಅಭಿಪ್ರಾಯಗಳನ್ನೇ ಹಿಡಿದುಕೊಂಡಿರುವುದು ನನಗೆ ಸಾಕಷ್ಟು ಕಷ್ಟಕರವಾಗಿದೆ; ಮತ್ತು ಎಷ್ಟೋ ಪಕ್ಷಿಗಳು ಹಾರಿ ಹೋಗುತ್ತವೆ.”

“ಕೆಲವೊಮ್ಮೆ ನನ್ನ ಪಾರಿವಾಳದ ಗೂಡಿನಲ್ಲಿ ನನಗೆ ಅಪರಿಚಿತವಾದ ಓಡಿಹೋದ ಜೀವಿಯೊಂದು ಸಿಗುತ್ತದೆ; ನಾನು ಅದರ ಮೇಲೆ ಕೈ ಇಟ್ಟಾಗ ಅದು ನಡುಗುತ್ತದೆ.”

“ಆದರೆ ಜರಥುಷ್ಟ್ರನು ಒಮ್ಮೆ ನಿನಗೆ ಏನು ಹೇಳಿದ್ದನು? ಕವಿಗಳು ಅತಿಯಾಗಿ ಸುಳ್ಳು ಹೇಳುತ್ತಾರೆ ಎಂದಲ್ಲವೇ. ಆದರೆ ಜರಥುಷ್ಟ್ರನೂ ಒಬ್ಬ ಕವಿಯೇ ಅಲ್ಲವೇ?”

“ಆಗ ಅವನು ಸತ್ಯವನ್ನೇ ಹೇಳಿದನೆಂದು ನೀನು ನಂಬುವೆಯಾ? ನೀನು ಅದನ್ನು ಏಕೆ ನಂಬುವೆ?”

ಶಿಷ್ಯನು ಉತ್ತರಿಸಿದನು: “ನಾನು ಜರಥುಷ್ಟ್ರನಲ್ಲಿ ನಂಬಿಕೆ ಇಟ್ಟಿದ್ದೇನೆ.” ಆದರೆ ಜರಥುಷ್ಟ್ರನು ತಲೆಯಾಡಿಸಿ ಮುಗುಳ್ನಕ್ಕನು.

“ನಂಬಿಕೆಯು ನನ್ನನ್ನು ಪವಿತ್ರಗೊಳಿಸುವುದಿಲ್ಲ, ಎಂದನವನು, ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಮೇಲಿನ ನಂಬಿಕೆಯಂತೂ ಅಲ್ಲವೇ ಅಲ್ಲ.”

“ಆದರೆ ಯಾರಾದರೂ ಸಂಪೂರ್ಣ ಗಂಭೀರತೆಯಿಂದ ಕವಿಗಳು ಅತಿಯಾಗಿ ಸುಳ್ಳು ಹೇಳುತ್ತಾರೆ ಎಂದು ಹೇಳಿದ್ದೇ ಆದಲ್ಲಿ: ಅವನು ಸರಿಯಾಗಿಯೇ ಹೇಳಿದ್ದಾನೆ—ನಾವು ಅತಿಯಾಗಿ ಸುಳ್ಳು ಹೇಳುತ್ತೇವೆ.”

“ನಮಗೆ ತಿಳಿದಿರುವುದು ತೀರಾ ಕಡಿಮೆ ಹಾಗೂ ನಾವು ಉತ್ತಮ ವಿದ್ಯಾರ್ಥಿಗಳೂ ಸಹ ಅಲ್ಲ; ಆದ್ದರಿಂದ ನಾವು ಸುಳ್ಳು ಹೇಳಲೇಬೇಕಾಗುತ್ತದೆ.”

“ನಮ್ಮಲ್ಲಿ ಯಾವ ಕವಿ ತಾನೇ ತನ್ನ ಮದ್ಯಕ್ಕೆ ನೀರು ಬೆರೆಸಿ ಕಲಬೆರಕೆ ಮಾಡಿಲ್ಲ? ನಮ್ಮ ನೆಲಮಾಳಿಗೆಗಳಲ್ಲಿ ಅನೇಕ ವಿಷಕಾರಿ ಮಿಶ್ರಣಗಳು ಹುಟ್ಟಿಕೊಂಡಿವೆ; ಅಲ್ಲಿ ಅನೇಕ ವರ್ಣಿಸಲಾಗದ ಸಂಗತಿಗಳು ಸಿದ್ಧಗೊಂಡಿವೆ.”

“ಮತ್ತು ನಮಗೆ ಕಡಿಮೆ ತಿಳಿದಿರುವುದರಿಂದ, ಆತ್ಮದಲ್ಲಿ ಬಡವರನ್ನು ನಾವು ಇಷ್ಟಪಡುತ್ತೇವೆ, ವಿಶೇಷವಾಗಿ ಅವರು ಯುವತಿಯರಾಗಿದ್ದರೆ.”

“ಮತ್ತು ಸಂಜೆ ವೇಳೆ ವಯಸ್ಸಾದ ಹೆಂಗಸರು ಪರಸ್ಪರ ಪಿಸುಗುಟ್ಟುವ ವಿಷಯಗಳ ಬಗ್ಗೆ ಸಹ ನಮಗೆ ಆಸಕ್ತಿಯಿದೆ. ಇದನ್ನೇ ನಾವು ನಮ್ಮೊಳಗಿನ ‘ಶಾಶ್ವತ ಸ್ತ್ರೀತನ’ ಎಂದು ಕರೆಯುತ್ತೇವೆ.”

“ಏನನ್ನಾದರೂ ನಿಜವಾಗಿ ಕಲಿಯುವವರಿಗೆ ಜ್ಞಾನದ ಕಡೆಗೆ ಹೋಗುವ ಒಂದು ರಹಸ್ಯ ದಾರಿ ಮುಚ್ಚಿಹೋಗುತ್ತದೆ ಎಂಬಂತೆ, ನಾವು ಜನರನ್ನೂ ಅವರ ‘ಜ್ಞಾನ’ವನ್ನೂ ನಂಬುತ್ತೇವೆ.”

ಮತ್ತು ಎಲ್ಲ ಕವಿಗಳೂ ಇದನ್ನು ನಂಬುತ್ತಾರೆ: ಹುಲ್ಲಿನ ಮೇಲೆ ಅಥವಾ ಏಕಾಂಗಿ ಬೆಟ್ಟದ ಇಳಿಜಾರುಗಳಲ್ಲಿ ಮಲಗಿ ಕಿವಿಗೊಡುವವನು, ಆಕಾಶ ಮತ್ತು ಭೂಮಿಯ ನಡುವಿನ ರಹಸ್ಯಗಳ ಬಗ್ಗೆ ಏನೋ ಒಂದನ್ನು ಕಲಿಯುತ್ತಾನೆ ಎಂದು.

ಮತ್ತು ಅವರಲ್ಲಿ ಮೃದುವಾದ ಭಾವನೆಗಳು ಮೂಡಿದಾಗ, ಪ್ರಕೃತಿಯೇ ತಮ್ಮೊಂದಿಗೆ ಪ್ರೀತಿಯಲ್ಲಿದೆ ಎಂದು ಕವಿಗಳು ಯಾವಾಗಲೂ ಭಾವಿಸುತ್ತಾರೆ.

ರಹಸ್ಯಗಳನ್ನು ಮತ್ತು ಪ್ರೇಮಭರಿತ ಹೊಗಳಿಕೆಗಳನ್ನು ಕಿವಿಯಲ್ಲಿ ಪಿಸುಗುಟ್ಟಲು ಪ್ರಕೃತಿಯೇ ತಮ್ಮ ಬಳಿಗೆ ಬರುತ್ತಾಳೆ ಎಂದು ಅವರು ಭಾವಿಸುತ್ತಾರೆ. ಇದರಿಂದ ಅವರು ಹೆಮ್ಮೆಯಿಂದ ತಮ್ಮನ್ನು ಇತರರಿಗಿಂತ ಮೇಲಾಗಿ ಕಾಣುತ್ತಾರೆ.

ಅಹ್, ಸ್ವರ್ಗ ಮತ್ತು ಭೂಮಿಯ ನಡುವೆ ಕವಿಗಳು ಮಾತ್ರ ಕನಸು ಕಂಡಿರುವ ಎಷ್ಟೋ ಸಂಗತಿಗಳಿವೆ!

ವಿಶೇಷವಾಗಿ ಸ್ವರ್ಗದ ಕುರಿತು. ಏಕೆಂದರೆ ಎಲ್ಲಾ ದೇವರುಗಳೂ, ಕಾವ್ಯಾತ್ಮಕ ಸಂಕೇತಗಳು ಕವಿಗಳ ಕಲ್ಪಿತ ಸೃಷ್ಟಿಗಳೇ.

ನಿಜವಾಗಿ, ನಾವು ಯಾವಾಗಲೂ ಮೇಲಕ್ಕೆ, ಮೇಘಲೋಕದ ಕಡೆಗೆ ಆಕರ್ಷಿತರಾಗುತ್ತೇವೆ. ಆ ಮೋಡಗಳ ಮೇಲೆ ನಾವು ನಮ್ಮ ಬಣ್ಣಬಣ್ಣದ ಗೊಂಬೆಗಳನ್ನು ಇಟ್ಟು, ಅವುಗಳನ್ನು ದೇವರುಗಳು ಮತ್ತು ಅತಿಮಾನವರು ಎಂದು ಕರೆಯುತ್ತೇವೆ.

ಈ ಎಲ್ಲಾ ದೇವರುಗಳು ಮತ್ತು ಅತಿಮಾನವರು ಅಂತಹ ಎತ್ತರದ ಆಸನಗಳಿಗೆ ಸಾಕಷ್ಟು ಹಗುರವಾಗಿಲ್ಲವೇ?

ಅಹ್, ವಾಸ್ತವವೆಂದು ಒತ್ತಿ ಹೇಳಲ್ಪಡುವ ಈ ಎಲ್ಲಾ ಅಪೂರ್ಣ ಸಂಗತಿಗಳಿಂದ ನಾನು ಎಷ್ಟು ದಣಿದಿದ್ದೇನೆ! ಅಹ್, ಕವಿಗಳಿಂದ ನಾನು ಎಷ್ಟು ದಣಿದಿದ್ದೇನೆ!

ಜರಥುಷ್ಟ್ರನು ಈ ಮಾತುಗಳನ್ನು ಹೇಳಿದಾಗ, ಅವನ ಶಿಷ್ಯನಿಗೆ ಬೇಸರವಾಯಿತು, ಆದರೆ ಅವನು ಮೌನವಾಗಿಯೇ ಉಳಿದನು. ಜರಥುಷ್ಟ್ರನೂ ಮೌನವಾದನು. ಅವನ ಕಣ್ಣುಗಳು ಬಹಳ ದೂರದ ಯಾವುದೋ ದೃಶ್ಯವನ್ನು ನೋಡುವಂತೆ ಒಳಮುಖವಾದವು.

ಕೊನೆಯಲ್ಲಿ ಅವನು ದೀರ್ಘ ನಿಟ್ಟುಸಿರು ಬಿಟ್ಟು ಉಸಿರೆಳೆದನು.

“ನಾನು ಇಂದಿನವನೂ ಹಾಗೂ ಹಿಂದಿನವನೂ ಆಗಿದ್ದೇನೆ,” ಎಂದು ಅವನು ಹೇಳಿದನು. “ಆದರೆ ನನ್ನೊಳಗೆ ನಾಳೆಯದೂ, ಅದರ ಮರುದಿನದ್ದೂ ಹಾಗೂ ದೂರದ ಭವಿಷ್ಯಕ್ಕೆ ಸಂಬಂದಿಸಿದ ಏನೋ ಒಂದು ನನ್ನಲ್ಲಿದೆ.”

“ಹಳೆಯ ಕವಿಗಳಿಂದಲೂ ಮತ್ತು ಹೊಸ ಕವಿಗಳಿಂದಲೂ ನಾನು ಬೇಸತ್ತಿದ್ದೇನೆ. ಅವರು ಎಲ್ಲರೂ ನನಗೆ ಸಮುದ್ರದ ಮೇಲ್ಮೈಯಂತೆ, ಆಳವಿಲ್ಲದ ಸಮುದ್ರಗಳಂತೆ ಕಾಣುತ್ತಾರೆ.”

“ಅವರು ಸಾಕಷ್ಟು ಆಳವಾಗಿ ಚಿಂತಿಸಿಲ್ಲ. ಆದ್ದರಿಂದ ಅವರ ಭಾವನೆಗಳು ಎಂದಿಗೂ ಆಳದ ತಳವನ್ನು ತಲುಪಿಲ್ಲ.”

“ಸ್ವಲ್ಪ ಸುಖದ ಅನುಭವ ಮತ್ತು ಸ್ವಲ್ಪ ಬೇಸರದ ಅನುಭವ—ಇಷ್ಟೇ ಅವರ ಧ್ಯಾನದ ಉನ್ನತ ಮಟ್ಟವಾಗಿದೆ.”

“ಅವರ ವೀಣೆಗಳ ಎಲ್ಲಾ ಝಣಝಣ ಶಬ್ದವೂ ನನಗೆ ಭೂತಗಳ ಉಸಿರಾಟದಂತೆ ಮತ್ತು ಭೂತಗಳ ರೆಕ್ಕೆ ಬಡಿತದಂತೆ ಕಾಣುತ್ತದೆ. ಸ್ವರಗಳ ನಿಜವಾದ ಉರಿಯುವ ಉತ್ಸಾಹದ ಬಗ್ಗೆ ಅವರು ಇದುವರೆಗೆ ಏನು ತಿಳಿದಿದ್ದಾರೆ?”

“ಅವರಲ್ಲಿ ನನಗೆ ಬೇಕಾದಷ್ಟು ಶುದ್ಧತೆಯೂ ಇಲ್ಲ. ತಮ್ಮ ನೀರು ಆಳವಾಗಿ ಕಾಣಲಿ ಎಂಬ ಕಾರಣಕ್ಕಾಗಿ ಅವರು ಅದನ್ನು ಉದ್ದೇಶಪೂರ್ವಕವಾಗಿ ಕಲುಷಿತಗೊಳಿಸುತ್ತಾರೆ.”

“ಹೀಗೆ ಮಾಡುವುದರ ಮೂಲಕ ಅವರು ತಮ್ಮನ್ನು ಸಮನ್ವಯಕಾರರು ಎಂದು ತೋರಿಸಿಕೊಳ್ಳಲು ಬಯಸುತ್ತಾರೆ. ಆದರೆ ನನಗೆ ಅವರು ಕೇವಲ ಮಧ್ಯವರ್ತಿಗಳು, ಮಿಶ್ರಣಕಾರರು, ಅರ್ಧ-ಅರ್ಧ ಸ್ವಭಾವದವರು ಮತ್ತು ಅಶುದ್ಧರು.”

“ಅಹ್, ನಾನು ಒಳ್ಳೆಯ ಮೀನುಗಳನ್ನು ಹಿಡಿಯಬೇಕೆಂಬ ಆಶೆಯಿಂದ ಅವರ ಸಮುದ್ರಕ್ಕೆ ನನ್ನ ಬಲೆಯನ್ನು ಎಸೆದೆ. ಆದರೆ ಪ್ರತಿ ಬಾರಿ ಅದನ್ನು ಮೇಲಕ್ಕೆ ಎಳೆದಾಗ, ಯಾವುದೋ ಪುರಾತನ ದೇವರ ತಲೆಯೇ ಸಿಕ್ಕಿತು.”

“ಹೀಗೆ ಸಮುದ್ರವು ಹಸಿದವನಿಗೆ ಆಹಾರದ ಬದಲು ಕಲ್ಲನ್ನು ಕೊಟ್ಟಿತು. ಮತ್ತು ಬಹುಶಃ ಅವರೂ ಸಹ ಸಮುದ್ರದಿಂದಲೇ ಬಂದಿರಬಹುದು.”

“ನಿಜ, ಅವರೊಳಗೆ ಕೆಲವೊಮ್ಮೆ ಮುತ್ತುಗಳು ಸಿಗುತ್ತವೆ. ಅದರಿಂದ ಅವರು ಇನ್ನಷ್ಟು ಗಟ್ಟಿಯಾದ ಚಿಪ್ಪುಮೀನುಗಳಂತೆ ಕಾಣುತ್ತಾರೆ.”

“ಮತ್ತು ಆತ್ಮದ ಬದಲು, ಅವರೊಳಗೆ ನಾನು ಅನೇಕ ಬಾರಿ ಉಪ್ಪಾದ ಲೋಳೆಯನ್ನು ಮಾತ್ರ ಕಂಡಿದ್ದೇನೆ.”

“ಅವರು ಸಮುದ್ರದಿಂದ ಅದರ ಅಹಂಕಾರವನ್ನೂ ಕಲಿತಿದ್ದಾರೆ: ಸಮುದ್ರವು ನವಿಲುಗಳಿಗೇ ನವಿಲಲ್ಲವೇ?”

“ಅತ್ಯಂತ ವಿಕಾರವಾದ ಎಮ್ಮೆಯ ಮುಂಭಾಗದಲ್ಲಿಯೂ ಅದು ತನ್ನ ಗರಿಯನ್ನು ಬಿಚ್ಚುತ್ತದೆ; ಬೆಳ್ಳಿ ಮತ್ತು ರೇಷ್ಮೆಯ ತನ್ನ ಗರಿಗಳ ಬೀಸಣಿಕೆಯನ್ಯನು ಪ್ರದರ್ಶಿಸಲು ಅದು ಎಂದಿಗೂ ಆಯಾಸಗೊಳ್ಳುವುದಿಲ್ಲ.”

“ಆ ಎಮ್ಮೆ ಅದನ್ನು ತಿರಸ್ಕಾರದಿಂದ ನೋಡುತ್ತದೆ; ಅದರ ಆತ್ಮ ಮರಳಿನ ಹತ್ತಿರವಿದೆ, ಪೊದೆಗಳಿಗೆ ಇನ್ನಷ್ಟು ಹತ್ತಿರವಿದೆ, ಮತ್ತು ಜೌಗು ಪ್ರದೇಶಕ್ಕೆ ಬಹಳ ಸನಿಹದಲ್ಲಿದೆ.”

“ಅದಕ್ಕೆ ಸೌಂದರ್ಯ, ಸಮುದ್ರ ಮತ್ತು ನವಿಲಿನ ವೈಭವದ ಆವಶ್ಯಕತೆ ಏನಿದೆ! ಈ ಉಪಮೆಯನ್ನು ನಾನು ಕವಿಗಳಿಗೆ ಹೇಳುತ್ತಿದ್ದೇನೆ.”

“ನಿಜವಾಗಿ, ಕವಿಯ ಆತ್ಮವೇ ನವಿಲುಗಳಲ್ಲಿಯ ನವಿಲು, ಮತ್ತು ಅಹಂಕಾರದ ಸಮುದ್ರವಾಗಿದೆ!”

“ಕವಿಯ ಆತ್ಮವು ಯಾವಾಗಲೂ ಪ್ರೇಕ್ಷಕರನ್ನು ಹುಡುಕುತ್ತದೆ—ಆ ಪ್ರೇಕ್ಷಕರು ಕೇವಲ ಎಮ್ಮೆಗಳಾಗಿದ್ದರೂ ಸಹ.”

“ಆದರೆ ಈ ಆತ್ಮದಿಂದ ನಾನು ದಣಿದಿದ್ದೇನೆ; ಮತ್ತು ಅದು ತನ್ನಿಂದ ತಾನೇ ದಣಿಯುವ ಕಾಲ ಹತ್ತಿರ ಬರುತ್ತಿರುವುದನ್ನು ನಾನು ಕಾಣುತ್ತಿದ್ದೇನೆ.”

“ಹೌದು, ಕವಿಗಳು ಬದಲಾಗುವುದನ್ನು ನಾನು ನೋಡಿದ್ದೇನೆ ಮತ್ತು ಅವರ ನೋಟವು ಅವರ ಕಡೆಗೇ ತಿರುಗಿದೆ.”

“ನಾನು ಆತ್ಮದ ಪಶ್ಚಾತ್ತಾಪಿಗಳನ್ನು ಉದಯಿಸುತ್ತಿರುವುದನ್ನು ಕಂಡಿದ್ದೇನೆ; ಅವರು ಕವಿಗಳಿಂದಲೇ ಹುಟ್ಟಿಕೊಂಡವರು.”

ಹೀಗೆ ಮಾತನಾಡಿದನು ಜರಥುಷ್ಟ್ರ.

0 ಕಾಮೆಂಟ್‌(ಗಳು):

ಕಾಮೆಂಟ್‌‌ ಪೋಸ್ಟ್‌ ಮಾಡಿ

 
ಜರಥುಷ್ಟ್ರನ ಉಪದೇಶಗಳು. Design by Pocket - Fixed by Blogger templates