ಬುಧವಾರ, ಏಪ್ರಿಲ್ 8, 2026

4. ದೇಹವನ್ನು ದ್ವೇಷಿಸುವವರು

ಬುಧವಾರ, ಏಪ್ರಿಲ್ 8, 2026
ದೇಹವನ್ನು ತಿರಸ್ಕರಿಸುವವರೊಂದಿಗೆ ನಾನು ಕೆಲವು ವಿಚಾರಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಅವರು ಹೊಸದನ್ನು ಕಲಿಯಲಿ ಅಥವಾ ಕಲಿಸಲಿ ಎಂದು ನಾನು ಬಯಸುವುದಿಲ್ಲ; ಅವರು ತಮ್ಮದೇ ದೇಹಕ್ಕೆ ವಿದಾಯ ಹೇಳಿ ಮೌನವಾಗಲಿ ಎಂದು ನಾನು ಬಯಸುತ್ತೇನೆ.

“ನಾನು ದೇಹವೂ ಆತ್ಮವೂ ಆಗಿದ್ದೇನೆ”—ಎಂದು ಮಗು ಹೇಳುತ್ತದೆ. ನಾವು ಮಕ್ಕಳಂತೆ ಏಕೆ ಮಾತನಾಡಬಾರದು?

ಆದರೆ ಜಾಗೃತನಾದವನು ಮತ್ತು ಜ್ಞಾನಿಯಾದವನು: "ನಾನು ಸಂಪೂರ್ಣವಾಗಿ ದೇಹವೇ, ಬೇರೇನೂ ಅಲ್ಲ; 'ಆತ್ಮ' ಎಂಬುದು ದೇಹದೊಳಗಿನ ಒಂದು ಭಾಗದ ಹೆಸರಷ್ಟೆ." ಎಂದು ಹೇಳುತ್ತಾನೆ.

ದೇಹವು ಒಂದು ಮಹಾನ್ ಪ್ರಜ್ಞೆ; ಒಂದೇ ಅರ್ಥ ಹೊಂದಿರುವ ಅನೇಕತೆ; ಇದು ಯುದ್ಧ ಮತ್ತು ಶಾಂತಿ ಎರಡೂ ಹೌದು, ಇದು ಕುರಿಗಳ ಹಿಂಡು ಮತ್ತು ಕುರಿಗಾಹಿ ಎರಡೂ ಹೌದು.

ನನ್ನ ಸಹೋದರನೇ, ನೀನು "ಆತ್ಮ" ಅಥವಾ "ಬುದ್ಧಿ" ಎಂದು ಯಾವುದನ್ನು ಕರೆಯುತ್ತೀಯೋ, ಅದು ನಿನ್ನ ದೇಹದ ಒಂದು ಸಣ್ಣ ಉಪಕರಣವಷ್ಟೆ—ನಿನ್ನ ದೇಹವೆಂಬ ಮಹಾಪ್ರಜ್ಞೆಯ ಕೈಯಲ್ಲಿರುವ ಒಂದು ಸಣ್ಣ ಆಟಿಕೆ ಅದು.

ನೀನು "ಅಹಂ" ಎಂದು ಹೇಳಿಕೊಂಡು ಆ ಪದದ ಬಗ್ಗೆ ಹೆಮ್ಮೆ ಪಡುತ್ತೀಯ. ಆದರೆ ಅದಕ್ಕಿಂತ ಮಹತ್ವದ ವಿಷಯ—ನೀನು ನಂಬಲು ಇಚ್ಚಿಸದ ವಿಷಯವೆಂದರೆ ನಿನ್ನ ದೇಹ ಮತ್ತು ಅದರ ಮಹಾಪ್ರಜ್ಞೆ. ಅದು "ನಾನು" ಎಂದು ಹೇಳುವುದಿಲ್ಲ, ಬದಲಾಗಿ ಅದನ್ನು ಕಾರ್ಯರೂಪದಲ್ಲಿ ತೋರಿಸುತ್ತದೆ.

ಇಂದ್ರಿಯಗಳ ಅನುಭವ ಮತ್ತು ಮನಸ್ಸಿನ ಆಲೋಚನೆ ಎಂದಿಗೂ ತಮ್ಮಲ್ಲೇ ಅಂತ್ಯವಾಗುವುದಿಲ್ಲ. ಆದರೆ ಇಂದ್ರಿಯಗಳು ಮತ್ತು ಮನಸ್ಸು ತಾವೇ ಎಲ್ಲದಕ್ಕೂ ಅಂತಿಮ ಎಂದು ನಿನ್ನನ್ನು ನಂಬಿಸಲು ಪ್ರಯತ್ನಿಸುತ್ತವೆ: ಅವು ಅಷ್ಟು ಅಹಂಕಾರಿಗಳು.

ಇಂದ್ರಿಯಗಳು ಮತ್ತು ಚೇತನ ಕೇವಲ ಉಪಕರಣಗಳು ಮತ್ತು ಆಟಿಕೆಗಳು: ಇವೆಲ್ಲದರ ಹಿಂದೆ ನಿಜವಾದ "ನಾನು" ಇದೆ. ಆ "ನಾನು" ಇಂದ್ರಿಯಗಳ ಕಣ್ಣಿನಿಂದ ನೋಡುತ್ತದೆ ಮತ್ತು ಚೈತನ್ಯದ ಕಿವಿಯಿಂದ ಕೇಳಿಸಿಕೊಳ್ಳುತ್ತದೆ.

ಆ "ನಾನು" ಯಾವಾಗಲೂ ಕೇಳಿಸಿಕೊಳ್ಳುತ್ತಾ ಹುಡುಕುತ್ತಿರುತ್ತದೆ; ಅದು ಹೋಲಿಕೆ ಮಾಡುತ್ತದೆ, ನಿಯಂತ್ರಿಸುತ್ತದೆ, ಗೆಲ್ಲುತ್ತದೆ ಮತ್ತು ನಾಶಪಡಿಸುತ್ತದೆ. ಅದು ಎಲ್ಲವನ್ನೂ ಆಳುತ್ತದೆ, ಮತ್ತು ನಿನ್ನ ಅಹಂ ಕೂಡ ಅದರ ಅಡಿಯಲ್ಲೇ ಇರುತ್ತದೆ.

ನಿನ್ನ ಆಲೋಚನೆಗಳ ಮತ್ತು ಭಾವನೆಗಳ ಹಿಂದೆ, ನನ್ನ ಸಹೋದರನೇ, ಒಬ್ಬ ಶಕ್ತಿಯುತ ಅಧಿಪತಿಯಿದ್ದಾನೆ, ಒಬ್ಬ ಅಪರಿಚಿತ ಜ್ಞಾನಿಯಿದ್ದಾನೆ—ಅದನ್ನೇ "ನಾನು" ಎನ್ನುತ್ತಾರೆ. ಅದು ನಿನ್ನ ದೇಹದಲ್ಲಿ ವಾಸಿಸುತ್ತದೆ; ಅಷ್ಟೇ ಅಲ್ಲ, ಅದು ನಿನ್ನ ದೇಹವೇ ಆಗಿದೆ.

ನಿನ್ನ ಅತ್ಯುತ್ತಮ ಆಲೋಚನೆಗಿಂತ ನಿನ್ನ ದೇಹದಲ್ಲಿ ಹೆಚ್ಚಿನ ಜ್ಞಾನವಿದೆ. ಅಸಲಿಗೆ ನಿನ್ನ ದೇಹಕ್ಕೆ ನಿನ್ನ ಜ್ಞಾನದ ಅಗತ್ಯವೇಕೆ ಎಂದು ಯಾರಿಗಾದರೂ ತಿಳಿದಿದೆಯೇ?

ನಿನ್ನಲ್ಲಿನ "ನಾನು" ನಿನ್ನ ಅಹಂ ಮತ್ತು ಅದರ ಹೆಮ್ಮೆಯ ನಡಿಗೆಯನ್ನು ನೋಡಿ ನಗುತ್ತದೆ. "ಈ ಆಲೋಚನೆಗಳು ನನಗೆ ಏನೇನೂ ಅಲ್ಲ," ಎಂದು ಅದು ತನಗೆ ತಾನೇ ಹೇಳಿಕೊಳ್ಳುತ್ತದೆ. "ಅವು ನನ್ನ ಗುರಿಯನ್ನು ತಲುಪಲು ಇರುವ ಒಂದು ದಾರಿಯಷ್ಟೆ. ನಾನು ಈ ಅಹಂನ ತಂತಿಗಳನ್ನು ಮೀಟಿ ಆಲೋಚನೆಗಳನ್ನು ಹುಟ್ಟಿಸುವವನು."

ಆ "ನಾನು" ಅಹಂಗೆ ಹೇಳುತ್ತದೆ: "ನೋವನ್ನು ಅನುಭವಿಸು!" ಆಗ ಅಹಂ ಕಷ್ಟಪಡುತ್ತದೆ ಮತ್ತು ಆ ನೋವನ್ನು ಹೇಗೆ ನಿಲ್ಲಿಸಬೇಕೆಂದು ಯೋಚಿಸುತ್ತದೆ—ಅದಕ್ಕಾಗಿಯೇ ಯೋಚಿಸುವ ಶಕ್ತಿಯನ್ನು ಅದಕ್ಕೆ ನೀಡಲಾಗಿದೆ.

ಆ "ನಾನು" ಅಹಂಗೆ ಹೇಳುತ್ತದೆ: "ಸುಖವನ್ನು ಅನುಭವಿಸು!" ಆಗ ಅಹಂ ಸಂತೋಷಪಡುತ್ತದೆ ಮತ್ತು ಪದೇ ಪದೇ ಸಂತೋಷವಾಗಿರುವುದು ಹೇಗೆ ಎಂದು ಯೋಚಿಸುತ್ತದೆ—ಅದಕ್ಕಾಗಿಯೇ ಯೋಚಿಸುವ ಶಕ್ತಿಯನ್ನು ಅದಕ್ಕೆ ನೀಡಲಾಗಿದೆ.

ದೇಹವನ್ನು ದ್ವೇಷಿಸುವವರಿಗೆ ನಾನು ಮತ್ತೊಂದು ವಿಚಾರ ತಿಳಿಸಲು ಬಯಸುತ್ತೇನೆ. ಅವರು ದ್ವೇಷಿಸುವುದು ಕೂಡ ಅವರು ಯಾವುದೋ ಮೌಲ್ಯವನ್ನು ನಂಬುತ್ತಿರುವುದರಿಂದಲೇ ಆಗಿದೆ. ಅಸಲಿಗೆ ಮೌಲ್ಯಗಳು, ಇಚ್ಛೆ ಮತ್ತು ದ್ವೇಷವನ್ನು ಸೃಷ್ಟಿಸಿದ್ದು ಯಾರು?

ಆ ಸೃಜನಶೀಲ "ನಾನು" ಮೌಲ್ಯಗಳನ್ನು ಮತ್ತು ತಿರಸ್ಕಾರವನ್ನು ಸೃಷ್ಟಿಸಿತು; ಅದು ಸುಖ ಮತ್ತು ದುಃಖವನ್ನು ಸೃಷ್ಟಿಸಿತು. ಸೃಷ್ಟಿಸುವ ಈ ದೇಹವು ತನ್ನ ಇಚ್ಛೆಯನ್ನು ಪೂರೈಸಲು ಒಂದು 'ಕೈ'ಯಂತೆ ಈ ಚೈತನ್ಯವನ್ನು ಸೃಷ್ಟಿಸಿಕೊಂಡಿತು.

ನೀವು ಮೂರ್ಖತನದಿಂದ ನಿಮ್ಮ ದೇಹದ ತಿರಸ್ಕಾರದಲ್ಲೂ, ನಿಮ್ಮ "ನಾನು" ಗೆ ಸೇವೆ ಸಲ್ಲಿಸುತ್ತಿದ್ದೀರಿ. ನಾನು ನಿಮಗೆ ಹೇಳುತ್ತೇನೆ, ನಿಮ್ಮ ಆ "ನಾನು" ಈಗ ಸಾಯಲು ಬಯಸುತ್ತಿದೆ ಮತ್ತು ಜೀವನದಿಂದ ವಿಮುಖವಾಗುತ್ತಿದೆ.

ನಿಮ್ಮ "ನಾನು" ಅದು ಅತಿ ಹೆಚ್ಚು ಬಯಸುವ ಕೆಲಸವನ್ನು ಮಾಡಲು ಈಗ ಸಾಧ್ಯವಾಗುತ್ತಿಲ್ಲ: ಅಂದರೆ ತನ್ನನ್ನು ಮೀರಿದ್ದನ್ನು ಸೃಷ್ಟಿಸುವುದು. ಅದೇ ಅದರ ಅತಿದೊಡ್ಡ ಆಸೆಯಾಗಿತ್ತು.

ಆದರೆ ಈಗ ಅದಕ್ಕೆ ತಡವಾಗಿದೆ: ಹಾಗಾಗಿ ನಿಮ್ಮ "ನಾನು" ಈಗ ಅಳಿಯಲು ಬಯಸುತ್ತಿದೆ, ಓ ದೇಹವನ್ನು ತಿರಸ್ಕರಿಸುವವರೇ.

ನಿಮ್ಮ ಆ "ನಾನು" ಅಳಿಯಲು ಬಯಸುತ್ತಿದೆ; ಅದಕ್ಕಾಗಿಯೇ ನೀವು ದೇಹವನ್ನು ತಿರಸ್ಕರಿಸಲು ಶುರು ಮಾಡಿದ್ದೀರಿ. ಏಕೆಂದರೆ ನಿಮಗಿಂತ ಶ್ರೇಷ್ಠವಾದುದನ್ನು ಸೃಷ್ಟಿಸಲು ನಿಮಗೀಗ ಸಾಧ್ಯವಾಗುತ್ತಿಲ್ಲ.

ಅದಕ್ಕಾಗಿಯೇ ನೀವು ಈಗ ಜೀವನದ ಮೇಲೂ ಭೂಮಿಯ ಮೇಲೂ ಕೋಪಗೊಂಡಿದ್ದೀರಿ. ನಿಮ್ಮ ದ್ವೇಷದ ನೋಟದ ಹಿಂದೆ ಒಂದು ಅಡಗಿದ ಅಸೂಯೆಯಿದೆ.

ದೇಹವನ್ನು ದ್ವೇಷಿಸುವವರೇ, ನಾನು ನಿಮ್ಮ ಹಾದಿಯಲ್ಲಿ ನಡೆಯುವುದಿಲ್ಲ! ಅತಿಮಾನವನನ್ನು ತಲುಪಲು ನೀವು ನನಗೆ ಸೇತುವೆಗಳಾಗಲಾರಿರಿ!

ಜರತುಷ್ಟ್ರನು ಹೀಗೆ ಹೇಳಿದನು.

0 ಕಾಮೆಂಟ್‌(ಗಳು):

ಕಾಮೆಂಟ್‌‌ ಪೋಸ್ಟ್‌ ಮಾಡಿ

 
ಜರಥುಷ್ಟ್ರನ ಉಪದೇಶಗಳು. Design by Pocket - Fixed by Blogger templates