ನಮ್ಮ ಅತ್ಯುತ್ತಮ ಶತ್ರುಗಳು ನಮ್ಮನ್ನು ರಕ್ಷಿಸುವುದು ನಮಗೆ ಇಷ್ಟವಾಗುವುದಿಲ್ಲ, ಹಾಗೆಯೇ ನಾವು ಮನಸ್ಸಾರೆ ಪ್ರೀತಿಸುವವರು ನಮ್ಮನ್ನು ರಕ್ಷಿಸುವುದು ನಮಗೆ ಇಷ್ಟವಾಗುವುದಿಲ್ಲ. ಆದ್ದರಿಂದ ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ!
ಯುದ್ಧದಲ್ಲಿರುವ ನನ್ನ ಸಹೋದರರೇ! ನಾನು ನಿಮ್ಮನ್ನು ಹೃದಯದಿಂದ ಪ್ರೀತಿಸುತ್ತೇನೆ. ನಾನು ಸಹ ನಿಮ್ಮಂತೆಯೇ. ನಾನೇ ನಿಮ್ಮ ಅತ್ಯುತ್ತಮ ಶತ್ರು ಕೂಡ. ಹಾಗಾಗಿ ಸತ್ಯವನ್ನು ಹೇಳಲು ನನಗೆ ಅವಕಾಶ ಕೊಡಿ!
ನಿಮ್ಮ ಹೃದಯದಲ್ಲಿರುವ ದ್ವೇಷ ಮತ್ತು ಅಸೂಯೆ ನನಗೆ ತಿಳಿದಿದೆ. ದ್ವೇಷ ಮತ್ತು ಅಸೂಯೆಯನ್ನು ಹೊಂದಿರದಷ್ಟು ದೊಡ್ಡವರೇನೂ ನೀವಲ್ಲ. ಹಾಗಿದ್ದ ಮೇಲೆ ಅವುಗಳ ಬಗ್ಗೆ ನಾಚಿಕೆಪಡದಷ್ಟು ದೊಡ್ಡವರಾಗಿ!
ನೀವು ಜ್ಞಾನದ ಸಂತರಾಗಲು ಸಾಧ್ಯವಾಗದಿದ್ದರೆ, ಕನಿಷ್ಠಪಕ್ಷ ಜ್ಞಾನದ ಯೋಧರಾಗಿ. ಜ್ಞಾನದ ಸಂತರಿಗೆ ಇವರೇ ಸಂಗಾತಿಗಳು ಮತ್ತು ದಾರಿ ತೋರಿಸುವವರು.
ನನಗೆ ಅನೇಕ ಸೈನಿಕರು ಕಾಣುತ್ತಿದ್ದಾರೆ; ಆದರೆ ನನಗೆ ಯೋಧರನ್ನು ನೋಡಲು ಇಚ್ಚಿಸುತ್ತೇನೆ! ಅವರು "ಸಮವಸ್ತ್ರ" ದರಿಸಿದರೂ ಸಹ; ಆ ಸಮವಸ್ತ್ರದ ಹಿಂದೆ ಅಡಗಿರುವುದು ಕೇವಲ ಏಕರೂಪವಾಗಿರಬಾರದು ಅಷ್ಟೆ!
ಯಾವಾಗಲೂ ಒಬ್ಬ ಶತ್ರುವಿಗಾಗಿ—ಅಂದರೆ ನಿಮ್ಮದೇ ಆದ ಶತ್ರುವಿಗಾಗಿ—ಹುಡುಕಾಡುವ ಕಣ್ಣುಗಳು ನಿಮ್ಮದಾಗಿರಲಿ. ನಿಮ್ಮಲ್ಲಿ ಕೆಲವರಿಗೆ ಮೊದಲ ನೋಟದಲ್ಲೇ ದ್ವೇಷ ಹುಟ್ಟುತ್ತದೆ.
ನಿಮ್ಮ ಶತ್ರುವನ್ನು ನೀವೇ ಹುಡುಕಿ; ನಿಮ್ಮ ಯುದ್ಧವನ್ನು ನೀವೇ ಮಾಡಿ, ನಿಮ್ಮ ಆಲೋಚನೆಗಳಿಗಾಗಿ! ನಿಮ್ಮ ಆಲೋಚನೆ ಸೋತರೂ, ನಿಮ್ಮ ಸತ್ಯನಿಷ್ಠೆ ಜಯಿಸಲಿ!
ನೀವು ಶಾಂತಿಯನ್ನು ಹೊಸ ಯುದ್ಧಗಳಿಗೆ ಒಂದು ದಾರಿಯೆಂದು ಪ್ರೀತಿಸಿ—ಮತ್ತು ದೀರ್ಘಕಾಲದ ಶಾಂತಿಗಿಂತ ಅಲ್ಪಕಾಲದ ಶಾಂತಿಯನ್ನೇ ಹೆಚ್ಚು ಇಷ್ಟಪಡಿ.
ನಾನು ನಿಮಗೆ ಕೆಲಸ ಮಾಡಲು ಸಲಹೆ ನೀಡುವುದಿಲ್ಲ, ಬದಲಾಗಿ ಹೋರಾಡಲು ಹೇಳುತ್ತೇನೆ. ಶಾಂತಿಯಿಂದಿರಲು ಹೇಳುವುದಿಲ್ಲ, ವಿಜಯ ಸಾಧಿಸಲು ಹೇಳುತ್ತೇನೆ. ನಿಮ್ಮ ಕೆಲಸವೇ ಒಂದು ಹೋರಾಟವಾಗಲಿ, ನಿಮ್ಮ ಶಾಂತಿಯೇ ಒಂದು ವಿಜಯವಾಗಲಿ!
ಒಬ್ಬನ ಬಳಿ ಬಿಲ್ಲು-ಬಾಣವಿದ್ದಾಗ ಮಾತ್ರ ಮೌನವಾಗಿ ಮತ್ತು ಶಾಂತವಾಗಿ ಕುಳಿತುಕೊಳ್ಳಲು ಸಾಧ್ಯ; ಇಲ್ಲವಾದಲ್ಲಿ ಬಡಬಡಿಸುತ್ತಾ ಜಗಳವಾಡುತ್ತಾನೆ. ನಿಮ್ಮ ಶಾಂತಿಯು ವಿಜಯವಾಗಲಿ!
ಒಳ್ಳೆಯ ಉದ್ದೇಶ ಯುದ್ಧವನ್ನು ಪವಿತ್ರಗೊಳಿಸುವುದು ಎಂದು ನೀವು ಹೇಳುತ್ತೀರಿ; ಆದರೆ ನಾನು ನಿಮಗೆ ಹೇಳುತ್ತೇನೆ: ಯುದ್ಧವೇ ಶ್ರೇಷ್ಠ, ಅದು ಯಾವುದೇ ಉದ್ದೇಶವನ್ನಾದರೂ ಪವಿತ್ರಗೊಳಿಸುತ್ತದೆ.
ದಾನಧರ್ಮಗಳಿಗಿಂತ ಯುದ್ಧ ಮತ್ತು ಧೈರ್ಯವು ಹೆಚ್ಚು ಮಹತ್ತರವಾದ ಕೆಲಸಗಳನ್ನು ಮಾಡಿವೆ. ಸಂತ್ರಸ್ತರನ್ನು ಇದುವರೆಗೆ ಉಳಿಸಿರುವುದು ನಿಮ್ಮ ಸಹಾನುಭೂತಿಯಲ್ಲ, ಬದಲಾಗಿ ನಿಮ್ಮ ಶೌರ್ಯ.
"ಒಳ್ಳೆಯತನ ಅಂದರೇನು?" ಎಂದು ನೀವು ಕೇಳುತ್ತೀರಿ. ಧೈರ್ಯಶಾಲಿಯಾಗಿರುವುದೇ ಒಳ್ಳೆಯತನ. "ಒಳ್ಳೆಯತನ ಎಂದರೆ ಸುಂದರ ಮತ್ತು ಮೃದು" ಎಂಬುದು ಚಿಕ್ಕ ಮಕ್ಕಳ ಮಾತು.
ಅವರು ನಿಮ್ಮನ್ನು ಹೃದಯಹೀನರು ಎನ್ನಬಹುದು: ಆದರೆ ನಿಮ್ಮ ಹೃದಯ ನಿಷ್ಕಲ್ಮಶ, ಮತ್ತು ನಿಮ್ಮ ಸದುದ್ದೇಶದ ಲಜ್ಜೆಯನ್ನು ನಾನು ಪ್ರೀತಿಸುತ್ತೇನೆ. ನೀವು ನಿಮ್ಮ ತುಂಬು ಶಕ್ತಿಯ ಕುರಿತು ನಾಚಿಕೆಪಡುತ್ತೀರಿ, ಆದರೆ ಇತರರು ತಮ್ಮ ಶಕ್ತಿಯ ಕೊರತೆಗೆ ನಾಚಿಕೆಪಡುತ್ತಾರೆ.
ನೀವು ಕುರೂಪಿಗಳೇ? ಸರಿ, ಹಾಗಿದ್ದರೆ ನನ್ನ ಸಹೋದರರೇ, ಆ ಕುರೂಪವನ್ನೇ ಒಂದು ಗಾಂಭೀರ್ಯದ ಉಡುಪಿನಂತೆ ತೊಟ್ಟುಕೊಳ್ಳಿ!
ನಿಮ್ಮ ಆತ್ಮವು ಮಹತ್ವದ್ದಾದಾಗ, ಅದು ಅಹಂಕಾರದತ್ತ ಸಾಗುತ್ತದೆ, ಮತ್ತು ನಿಮ್ಮ ಆ ಉನ್ನತ ಸ್ಥಿತಿಯಲ್ಲಿ ಒಂದು ರೀತಿಯ ತುಂಟತನ ಅಥವಾ ಕ್ರೌರ್ಯವಿರುತ್ತದೆ. ನನಗದರ ಅರಿವಿದೆ.
ಕೆಟ್ಟತನದಲ್ಲಿ ಅಹಂಕಾರಿ ಮತ್ತು ದುರ್ಬಲ ಇಬ್ಬರೂ ಭೇಟಿಯಾಗುತ್ತಾರೆ. ಆದರೆ ಅವರು ಒಬ್ಬರನ್ನೊಬ್ಬರು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ನನಗದರ ಅರಿವಿದೆ.
ನೀವು ಕೇವಲ ದ್ವೇಷಿಸಬಹುದಾದ ಶತ್ರುಗಳನ್ನು ಹೊಂದಿರಬೇಕೇ ಹೊರತು, ಹೀಯಾಳಿಸುವಂತಹ ಶತ್ರುಗಳನ್ನಲ್ಲ. ನಿಮ್ಮ ಶತ್ರುಗಳ ಬಗ್ಗೆ ನಿಮಗೆ ಹೆಮ್ಮೆ ಇರಲಿ; ಆಗ ಶತ್ರುವಿನ ಯಶಸ್ಸು ಕೂಡ ನಿಮ್ಮ ಯಶಸ್ಸೇ ಆಗಿರುತ್ತದೆ.
ಪ್ರತಿರೋಧ ವ್ಯಕ್ತಪಡಿಸುವುದು ಗುಲಾಮನ ಲಕ್ಷಣ. ವಿಧೇಯತೆ ನಿಮ್ಮ ವೈಶಿಷ್ಟ್ಯವಾಗಿರಲಿ. ನೀವು ಆಜ್ಞಾಪಿಸುವುದೇ ಒಂದು ರೀತಿಯ ವಿಧೇಯತೆಯಾಗಿರಲಿ!
ಒಬ್ಬ ಒಳ್ಳೆಯ ಯೋಧನಿಗೆ "ನಾನು ಮಾಡುತ್ತೇನೆ" ಎನ್ನುವುದಕ್ಕಿಂತ "ನೀನು ಮಾಡಲೇಬೇಕು" ಎಂಬ ಆಜ್ಞೆಯೇ ಹೆಚ್ಚು ಇಷ್ಟವಾಗುತ್ತದೆ. ನಿಮಗೆ ಯಾವುದು ಅತ್ಯಂತ ಪ್ರಿಯವೋ, ಅದನ್ನು ಮೊದಲು ನಿಮಗೆ ಆಜ್ಞಾಪಿಸಲಾಗುವುದು.
ಜೀವನದ ಮೇಲಿನ ನಿಮ್ಮ ಪ್ರೀತಿಯು ನಿಮ್ಮ ಉನ್ನತ ಭರವಸೆಯ ಮೇಲಿನ ಪ್ರೀತಿಯಾಗಲಿ; ಮತ್ತು ಆ ಉನ್ನತ ಭರವಸೆಯು ಜೀವನದ ಅತ್ಯುನ್ನತ ಆಲೋಚನೆಯಾಗಲಿ!
ಆ ಅತ್ಯುನ್ನತ ಆಲೋಚನೆಯೇ: ಮಾನವನು ಮೀರಿ ಬೆಳೆಯಬೇಕಾದ ಸ್ಥಿತಿ.
ಹಾಗಾಗಿ ವಿಧೇಯತೆ ಮತ್ತು ಯುದ್ಧದ ಜೀವನವನ್ನು ನಡೆಸಿ! ದೀರ್ಘಾಯುಷ್ಯದ ಬಗ್ಗೆ ಯಾರು ಚಿಂತಿಸುತ್ತಾರೆ? ಯಾವ ಯೋಧ ತನಗೆ ರಕ್ಷಣೆ ಬೇಕೆಂದು ಬಯಸುತ್ತಾನೆ?
ನಾನು ನಿಮ್ಮನ್ನು ರಕ್ಷಿಸುವುದಿಲ್ಲ, ನನ್ನ ಹೃದಯದ ಆಳದಿಂದ ನಾನು ನಿಮ್ಮನ್ನು ಪ್ರೀತಿಸುತ್ತೇನೆ, ಯುದ್ಧದಲ್ಲಿರುವ ನನ್ನ ಸಹೋದರರೇ!
— ಹೀಗೆ ಹೇಳಿದನು ಜರತುಷ್ಟ್ರ.
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ