ನನ್ನ ಸಹೋದರನೇ, ನೀನು ಏಕಾಂತಕ್ಕೆ ಹೋಗಲು ಬಯಸುವೆಯಾ? ನಿನಗಾಗಿ ನೀನೇ ದಾರಿ ಹುಡುಕ ಹೊರಟಿರುವೆಯಾ? ಸ್ವಲ್ಪ ತಡಮಾಡಿ ನಾನು ಹೇಳುವುದನ್ನು ಕೇಳು.
ಜನಸಮೂಹವು "ಯಾರು ದಾರಿಯನ್ನು ಹುಡುಕುವರೋ ಅವರು ಸುಲಭವಾಗಿ ದಾರಿ ತಪ್ಪುತ್ತಾರೆ; ಏಕಾಂತದಲ್ಲಿರುವುದು ತಪ್ಪು" ಎಂದು ಹೇಳುತ್ತದೆ. ಮತ್ತು ನೀನು ಕೂಡ ದೀರ್ಘಕಾಲ ಆ ಸಮೂಹದ ಭಾಗವಾಗಿಯೇ ಇದ್ದವನು.
ಆ ಜನಸಮೂಹದ ಧ್ವನಿ ಇನ್ನೂ ನಿನ್ನಲ್ಲಿ ಪ್ರತಿಧ್ವನಿಸುತ್ತಿರುತ್ತದೆ. "ನನ್ನಲ್ಲಿ ಇನ್ನು ನಿಮ್ಮೊಂದಿಗೆ ಹೊಂದುವಂತಹ ಯಾವುದೇ ಸಾಮಾನ್ಯ ವಿವೇಕ ಅಥವಾ ಆತ್ಮಸಾಕ್ಷಿ ಉಳಿದಿಲ್ಲ" ಎಂದು ನೀನು ಹೇಳಿದಾಗ, ಅದು ನಿನಗೆ ಒಂದು ಗೋಳು ಮತ್ತು ನೋವಾಗಿ ಪರಿಣಮಿಸುತ್ತದೆ.
ನೋಡು, ಆ ನೋವು ಕೂಡ ಅದೇ ಹಳೆಯ ಆತ್ಮಸಾಕ್ಷಿಯಿಂದಲೇ ಹುಟ್ಟಿದ್ದು; ಆ ಹಳೆಯ ನೀತಿ ಸಂಹಿತೆಯ ಕೊನೆಯ ಮಿಂಚು ಇನ್ನೂ ನಿನ್ನ ಸಂಕಟದಲ್ಲಿ ಹೊಳೆಯುತ್ತಿದೆ.
ಆದರೆ ನೀನು ನಿನ್ನ ಸಂಕಟದ ಹಾದಿಯಲ್ಲೇ, ಅಂದರೆ ನಿನ್ನನ್ನು ನೀನು ಕಂಡುಕೊಳ್ಳುವ ಹಾದಿಯಲ್ಲೇ ಮುಂದೆ ಸಾಗಲು ಬಯಸುವೆಯಾ? ಹಾಗಿದ್ದರೆ, ಹಾಗೆ ಮಾಡಲು ನಿನಗಿರುವ ಅಧಿಕಾರ ಮತ್ತು ಶಕ್ತಿಯನ್ನು ನನಗೆ ತೋರಿಸು!
ನೀನು ಒಂದು ಹೊಸ ಶಕ್ತಿಯೇ ಮತ್ತು ಹೊಸ ಅಧಿಕಾರವೇ? ಒಂದು ಮೊದಲ ಚಲನೆಯೇ? ತಾನಾಗಿಯೇ ಉರುಳುವ ಚಕ್ರವೇ? ನಕ್ಷತ್ರಗಳು ನಿನ್ನ ಸುತ್ತಲೂ ಸುತ್ತುವಂತೆ ಮಾಡಲು ನಿನಗೆ ಸಾಧ್ಯವೇ?
ಅಯ್ಯೋ! ಉನ್ನತ ಸ್ಥಾನಕ್ಕೇರಬೇಕೆಂಬ ಎಷ್ಟೊಂದು ಹಂಬಲವಿದೆ! ಮಹತ್ವಾಕಾಂಕ್ಷೆಯ ಎಷ್ಟೊಂದು ತೊಳಲಾಟಗಳಿವೆ! ನೀನು ಕೇವಲ ಹಂಬಲವುಳ್ಳವನಲ್ಲ ಎಂದು ನನಗೆ ಸಾಬೀತುಪಡಿಸು!
ಅಯ್ಯೋ! ಎಷ್ಟೋ ದೊಡ್ಡ ಆಲೋಚನೆಗಳು ಕೇವಲ ಗಾಳಿ ತುಂಬುವ ಬಲೂನಿನಂತೆ: ಅವು ಉಬ್ಬಿಸುತ್ತವೆಯೇ ಹೊರತು, ಮನುಷ್ಯನನ್ನು ಮೊದಲಿಗಿಂತಲೂ ಹೆಚ್ಚು ಟೊಳ್ಳಾಗಿಸುತ್ತವೆ.
ನಿನ್ನನ್ನು ನೀನು ಸ್ವತಂತ್ರ ಎಂದು ಕರೆದುಕೊಳ್ಳುವೆಯಾ? ಕೆಲವರು ತಮ್ಮ ಸೇವೆಯನ್ನು ತೊರೆದಾಗ ತಮ್ಮ ಮೌಲ್ಯವನ್ನೇ ಕಳೆದುಕೊಳ್ಳುತ್ತಾರೆ.
ಆ ಬಂಧನದಿಂದ ಮುಕ್ತಿ ಪಡೆಯುವ 'ಅರ್ಹತೆ' ನಿನಗಿದೆಯೇ? ಎಷ್ಟೋ ಜನರು ತಮ್ಮ ಗುಲಾಮಗಿರಿಯನ್ನು ಎಸೆದಾಗ, ಅದರ ಜೊತೆಗೇ ತಮ್ಮಲ್ಲಿದ್ದ ಕೊನೆಯ ಮೌಲ್ಯವನ್ನೂ ಕಳೆದುಕೊಂಡಿದ್ದಾರೆ.
ಯಾವುದರಿಂದ ಮುಕ್ತಿ? ಅದು ಜರತುಷ್ಟ್ರನಿಗೆ ಮುಖ್ಯವಲ್ಲ! ಆದರೆ “ಯಾವುದಕ್ಕಾಗಿ ಮುಕ್ತಿ?” ಎಂಬುದನ್ನು ಸ್ಪಷ್ಟವಾಗಿ ಹೇಳು.
ನಿನಗೆ ನೀನೇ ನಿನ್ನ ಕೆಟ್ಟದ್ದು ಮತ್ತು ಒಳ್ಳೆಯದನ್ನು ನಿರ್ಧರಿಸಬಲ್ಲೆಯಾ? ನಿನ್ನ ಇಚ್ಛೆಯನ್ನೇ ನಿನಗೆ ನೀನು ಕಾನೂನನ್ನಾಗಿ ಮಾಡಿಕೊಳ್ಳಬಲ್ಲೆಯಾ? ನಿನಗೆ ನೀನೇ ನ್ಯಾಯಾಧೀಶನಾಗಲು ಮತ್ತು ನಿನ್ನದೇ ಕಾನೂನಿನ ಪರವಾಗಿ ಪ್ರತಿಕಾರ ತೀರಿಸಿಕೊಳ್ಳಲು ಸಾಧ್ಯವೇ?
ತನ್ನದೇ ಆದ ಕಾನೂನಿನ ನ್ಯಾಯಾಧೀಶ ಮತ್ತು ಪ್ರತಿಕಾರ ತೀರಿಸುವವನೊಂದಿಗೆ ಒಂಟಿಯಾಗಿರುವುದು ಭಯಾನಕವಾದುದು. ಇದು ಶೂನ್ಯವಾದ ಮರುಭೂಮಿಯಂತಹ ಆಕಾಶಕ್ಕೆ ಮತ್ತು ಏಕಾಂತದ ಮಂಜಿನಂತಹ ತಣ್ಣನೆಯ ಉಸಿರಿಗೆ ಎಸೆಯಲ್ಪಟ್ಟ ನಕ್ಷತ್ರದಂತಿದೆ.
ಇಂದು ನೀನು ಜನಸಮೂಹದಿಂದ ಸಂಕಟಪಡುತ್ತಿದ್ದೀಯಾ, ಓ ವ್ಯಕ್ತಿಯೇ; ಇಂದು ನಿನ್ನಲ್ಲಿ ಕುಗ್ಗದ ಧೈರ್ಯ ಮತ್ತು ಭರವಸೆಗಳಿವೆ.
ಆದರೆ ಒಂದು ದಿನ ಈ ಏಕಾಂತ ನಿನ್ನನ್ನು ದಣಿಸುತ್ತದೆ; ಅಂದು ನಿನ್ನ ಹೆಮ್ಮೆ ಮಣಿಯುತ್ತದೆ ಮತ್ತು ಧೈರ್ಯ ಕುಗ್ಗುತ್ತದೆ. ಒಂದು ದಿನ ನೀನು ಕಿರುಚುವೆ: "ನಾನು ಒಬ್ಬಂಟಿಯಾಗಿದ್ದೇನೆ!" ಎಂದು.
ಒಂದು ದಿನ ನಿನಗೆ ನಿನ್ನ ಉನ್ನತ ಸ್ಥಿತಿ ಕಾಣಿಸುವುದಿಲ್ಲ, ಬದಲಾಗಿ ನಿನ್ನ ಕೀಳುತನವೇ ಅತಿ ಹತ್ತಿರವಾಗಿ ಕಾಣಿಸುತ್ತದೆ; ನಿನ್ನ ಆ ಗಾಂಭೀರ್ಯವೇ ನಿನಗೆ ಒಂದು ಭೂತದಂತೆ ಕಂಡು ಹೆದರಿಸುತ್ತದೆ. ಅಂದು ನೀನು ಕಿರುಚುವೆ: "ಎಲ್ಲವೂ ಸುಳ್ಳು!" ಎಂದು.
ಒಬ್ಬಂಟಿಯಾಗಿರುವವನನ್ನು ಕೊಲ್ಲಲು ಹವಣಿಸುವ ಕೆಲವು ಭಾವನೆಗಳಿವೆ; ಅವು ನಿನ್ನನ್ನು ಕೊಲ್ಲಲು ವಿಫಲವಾದರೆ, ಅವುಗಳೇ ಸಾಯಬೇಕು! ಆದರೆ ಅವುಗಳನ್ನು ಕೊಲ್ಲುವ ಸಾಮರ್ಥ್ಯ ನಿನಗಿದೆಯೇ? ಅಂದರೆ ನೀನು ಕೊಲೆಗಾರನಾಗಬಲ್ಲೆಯಾ?
ನನ್ನ ಸಹೋದರನೇ, "ತಿರಸ್ಕಾರ" ಎಂಬ ಪದದ ಅರ್ಥ ನಿನಗೆ ತಿಳಿದಿದೆಯೇ? ಮತ್ತು ನಿನ್ನನ್ನು ತಿರಸ್ಕರಿಸುವವರ ಬಗ್ಗೆಯೂ ನೀನು ನ್ಯಾಯಯುತವಾಗಿರಲು ಪಡುವ ಸಂಕಟ ನಿನಗೆ ಗೊತ್ತೇ?
ನಿನ್ನ ಬಗ್ಗೆ ಜನರು ವಿಭಿನ್ನವಾಗಿ ಆಲೋಚಿಸುವಂತೆ ನೀನು ಒತ್ತಾಯಿಸುವೆ; ಇದನ್ನು ಅವರು ನಿನ್ನ ಮೇಲಿನ ದೊಡ್ಡ ಅಪರಾಧವೆಂದು ಪರಿಗಣಿಸುತ್ತಾರೆ. ನೀನು ಅವರ ಹತ್ತಿರ ಬಂದೆ, ಆದರೆ ಅವರನ್ನು ದಾಟಿ ಮುಂದೆ ಹೋದೆ: ಇದಕ್ಕಾಗಿ ಅವರು ನಿನ್ನನ್ನು ಎಂದಿಗೂ ಕ್ಷಮಿಸುವುದಿಲ್ಲ.
ನೀನು ಅವರಿಗಿಂತ ಮೇಲೆ ಏರುವೆ: ಆದರೆ ನೀನು ಎಷ್ಟು ಎತ್ತರಕ್ಕೆ ಏರುವೆಯೋ, ಅಸೂಯೆಯ ಕಣ್ಣುಗಳಿಗೆ ನೀನು ಅಷ್ಟು ಸಣ್ಣವನಾಗಿ ಕಾಣಿಸುವೆ. ಎಲ್ಲಕ್ಕಿಂತ ಹೆಚ್ಚಾಗಿ, ಹಾರುವವನನ್ನು ಲೋಕ ದ್ವೇಷಿಸುತ್ತದೆ.
"ನೀವು ನನ್ನ ವಿಷಯದಲ್ಲಿ ನ್ಯಾಯವಾಗಿರಲು ಹೇಗೆ ಸಾಧ್ಯ!" ಎಂದು ನೀನು ಹೇಳಬೇಕು—"ನಿಮ್ಮ ಅನ್ಯಾಯವನ್ನೇ ನಾನು ನನ್ನ ಪಾಲಿನ ಭಾಗವೆಂದು ಸ್ವೀಕರಿಸುತ್ತೇನೆ."
ಅವರು ಏಕಾಂಗಿಯ ಮೇಲೆ ಅನ್ಯಾಯ ಮತ್ತು ಕೆಸರನ್ನು ಎಸೆಯುತ್ತಾರೆ: ಆದರೆ ನನ್ನ ಸಹೋದರನೇ, ನೀನು ನಕ್ಷತ್ರವಾಗಬೇಕೆಂದರೆ, ಆ ಕಾರಣಕ್ಕಾಗಿಯೇ ನೀನು ಅವರಿಗಾಗಿ ಪ್ರಕಾಶಿಸಲೇಬೇಕು!
ಸಜ್ಜನರು ಮತ್ತು 'ನೀತಿವಂತರು' ಎಂದು ಕರೆಸಿಕೊಳ್ಳುವವರ ಬಗ್ಗೆ ಎಚ್ಚರದಿಂದಿರು! ತಮ್ಮದೇ ಆದ ಹೊಸ ಸದ್ಗುಣಗಳನ್ನು ಸೃಷ್ಟಿಸುವವರನ್ನು ಅವರು ಶಿಲುಬೆಗೇರಿಸಲು ಬಯಸುತ್ತಾರೆ—ಅವರು ಏಕಾಂಗಿಗಳನ್ನು ದ್ವೇಷಿಸುತ್ತಾರೆ.
ಪವಿತ್ರವೆನ್ನಿಸಿಕೊಳ್ಳುವ ಮುಗ್ಧತೆಯ ಬಗ್ಗೆಯೂ ಎಚ್ಚರವಿರಲಿ! ಯಾವುದು ಸರಳವಾಗಿಲ್ಲವೋ ಅದೆಲ್ಲವೂ ಅದಕ್ಕೆ ಅಪವಿತ್ರವಾಗಿ ಕಾಣುತ್ತದೆ; ಅಂತಹ ಮುಗ್ಧತೆಯು ಬೆಂಕಿಯೊಂದಿಗೆ ಆಟವಾಡಲು ಇಷ್ಟಪಡುತ್ತದೆ.
ಹಾಗೆಯೇ ನಿನ್ನ ಪ್ರೀತಿಯ ಆವೇಶದ ಬಗ್ಗೆಯೂ ಎಚ್ಚರವಾಗಿರು! ಏಕಾಂಗಿಯು ತನ್ನನ್ನು ಭೇಟಿಯಾಗುವ ಯಾರಿಗಾದರೂ ಅತಿ ಬೇಗನೆ ಕೈ ಚಾಚುತ್ತಾನೆ.
ಅನೇಕರಿಗೆ ನೀನು ನಿನ್ನ ಕೈಯನ್ನು ನೀಡಬಾರದು, ಬದಲಾಗಿ ನಿನ್ನ ಪಾದವನ್ನು ನೀಡಬೇಕು; ಮತ್ತು ನಿನ್ನ ಆ ಪಾದಕ್ಕೆ ಉಗುರುಗಳಿರಲಿ ಎಂದು ನಾನು ಬಯಸುತ್ತೇನೆ.
ಆದರೆ ನೀನು ಸಂಧಿಸಬಹುದಾದ ಅತ್ಯಂತ ಕೆಟ್ಟ ಶತ್ರು ಅಂದರೆ ಅದು ನೀನೇ; ಕಾಡುಗಳಲ್ಲಿ ಮತ್ತು ಗುಹೆಗಳಲ್ಲಿ ನಿನಗೆ ನೀನೇ ಹೊಂಚು ಹಾಕುವೆಯಾ?.
ಏಕಾಂಗಿಯೇ, ನೀನು ನಿನ್ನನ್ನು ಕಂಡುಕೊಳ್ಳುವ ಹಾದಿಯಲ್ಲಿದ್ದೀಯಾ! ನಿನ್ನನ್ನು ಮತ್ತು ನಿನ್ನೊಳಗಿನ ಏಳು ದೆವ್ವಗಳನ್ನು ದಾಟಿಯೇ ನಿನ್ನ ದಾರಿ ಸಾಗುತ್ತದೆ!
ನಿನಗೆ ನೀನೇ ಒಬ್ಬ ಪಾಖಂಡಿಯಾಗಿ, ಮಾಂತ್ರಿಕನಾಗಿ, ಭವಿಷ್ಯ ಹೇಳುವವನಾಗಿ, ಮೂರ್ಖನಾಗಿ, ಸಂಶಯವಾದಿಯಾಗಿ, ಧರ್ಮಾತೀತನಾಗಿ ಮತ್ತು ಖಳನಾಯಕನಾಗಿ ಕಾಣಿಸಿಕೊಳ್ಳುತ್ತೀಯಾ.
ನಿನ್ನದೇ ಬೆಂಕಿಯಲ್ಲಿ ನಿನ್ನನ್ನು ಸುಟ್ಟುಕೊಳ್ಳಲು ನೀನು ಸಿದ್ಧನಾಗಿರಬೇಕು; ಮೊದಲು ಬೂದಿಯಾಗದೆ ನೀನು ಹೊಸಬನಾಗಿ ಹುಟ್ಟಲು ಹೇಗೆ ಸಾಧ್ಯ!
ಏಕಾಂಗಿಯೇ, ನೀನು ಸೃಷ್ಟಿಕರ್ತನ ಹಾದಿಯಲ್ಲಿ ಸಾಗುತ್ತಿರುವೆಯಾ: ನಿನ್ನ ಏಳು ದೆವ್ವಗಳಿಂದಲೇ ನೀನು ನಿನಗಾಗಿ ಒಬ್ಬ ದೇವರನ್ನು ಸೃಷ್ಟಿಸಿಕೊಳ್ಳುವೆಯಾ!
ಏಕಾಂಗಿಯೇ, ನೀನು ಪ್ರೇಮಿಯ ಹಾದಿಯಲ್ಲಿ ಸಾಗುತ್ತಿದ್ದೀಯಾ: ನೀನು ನಿನ್ನನ್ನು ಪ್ರೀತಿಸುತ್ತಿರುವೆ, ಮತ್ತು ಆ ಕಾರಣಕ್ಕಾಗಿಯೇ ನಿನ್ನನ್ನು ನೀನು ತಿರಸ್ಕರಿಸಿಕೊಳ್ಳುತ್ತಿರುವೆ—ಯಾರು ಅತಿಯಾಗಿ ಪ್ರೀತಿಸುತ್ತಾರೋ ಅವರು ಮಾತ್ರ ಹಾಗೆ ತಿರಸ್ಕರಿಸಲು ಸಾಧ್ಯ.
ಸೃಷ್ಟಿಸಲು ಬಯಸುವವನು ತನ್ನನ್ನು ತಿರಸ್ಕೊಕರಿಸಿಕೊಳ್ಳುವನು, ಏಕೆಂದರೆ ಅವನು ಇನ್ನೂ ಉತ್ತಮವಾದುದನ್ನು ಬಯಸುವನು! ಯಾವುದನ್ನು ತಾನು ಪ್ರೀತಿಸುವನೋ ಅದನ್ನೇ ತಿರಸ್ಕರಿಸದವನಿಗೆ ಪ್ರೀತಿಯ ಬಗ್ಗೆ ಏನು ತಾನೇ ತಿಳಿದಿರಲು ಸಾಧ್ಯ?
ನಿನ್ನ ಪ್ರೀತಿಯೊಂದಿಗೆ ಮತ್ತು ನಿನ್ನ ಸೃಷ್ಟಿಯ ಸಾಮರ್ಥ್ಯದೊಂದಿಗೆ ನಿನ್ನ ಏಕಾಂತಕ್ಕೆ ಹೋಗು, ನನ್ನ ಸಹೋದರನೇ; ನ್ಯಾಯವು ಬಹಳ ತಡವಾಗಿ ನಿನ್ನನ್ನು ಹುಡುಕಿಕೊಂಡು ಕುಂಟುತ್ತಾ ಬರುತ್ತದೆ.
ನನ್ನ ಕಣ್ಣೀರಿನೊಂದಿಗೆ ನಿನ್ನ ಏಕಾಂತಕ್ಕೆ ಹೋಗು, ನನ್ನ ಸಹೋದರನೇ. ತನ್ನನ್ನು ಮೀರಿ ಏನನ್ನಾದರೂ ಸೃಷ್ಟಿಸಲು ಬಯಸುವವನನ್ನು ಮತ್ತು ಆ ಹಾದಿಯಲ್ಲಿ ಸೋಲುವವನನ್ನು ನಾನು ಪ್ರೀತಿಸುತ್ತೇನೆ.
ಹೀಗೆ ಹೇಳಿದನು ಜರತುಷ್ಟ್ರ.
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ