ಒಂಟಿಯಾಗಿ ಬದುಕುವ ವ್ಯಕ್ತಿಗೆ ತನ್ನ ಸುತ್ತ ಒಬ್ಬರು ಇದ್ದರೂ ಹೆಚ್ಚು ಎನಿಸುತ್ತದೆ. ಆದರೆ ಸಂಪೂರ್ಣ ಒಂಟಿತನವೂ ಕಷ್ಟವೇ — ಮನಸ್ಸು ತನ್ನಷ್ಟಕ್ಕೆ ತಾನೇ ಮಾತಾಡಿಕೊಳ್ಳುತ್ತದೆ. ಒಂದು ಸ್ನೇಹಿತನಿಲ್ಲದೆ ಈ ಆಂತರಿಕ ಸಂಭಾಷಣೆ ತಾಳಲಾರದಷ್ಟು ಭಾರವಾಗುತ್ತದೆ.
ಏಕಾಂಗಿಯ ಪಾಲಿಗೆ ಸ್ನೇಹಿತನು ಯಾವಾಗಲೂ 'ಮೂರನೆಯವನು': ಈ ಮೂರನೆಯವನು ಬಾಟಲಿಯನ್ನು ಮುಳುಗದಂತೆ ಕಾಪಾಡುವ ಒಂದು ಬೋಚಿನಂತೆ, ಇಬ್ಬರ ನಡುವಿನ ಸಂಭಾಷಣೆಯು ಅತಿಯಾದ ಆಳಕ್ಕೆ ಕುಸಿದು ಹೋಗದಂತೆ ತಡೆಯುತ್ತಾನೆ.
ಇತರರ ಮೇಲಿನ ನಮ್ಮ ನಂಬಿಕೆಯು, ನಮ್ಮ ಮೇಲೆಯೇ ನಂಬಿಕೆ ಇಡಲು ನಮಗಿರುವ ಅಸಮರ್ಥತೆಯನ್ನು ತೋರಿಸಿಕೊಡುತ್ತದೆ. ಸ್ನೇಹಿತನಿಗಾಗಿ ನಮಗಿರುವ ಹಂಬಲವೇ ನಮ್ಮನ್ನು ಬಯಲಿಗೆಳೆಯುವ ದ್ರೋಹಿ.
ಅನೇಕ ಬಾರಿ ನಾವು ನಮ್ಮ ಪ್ರೀತಿಯ ಮೂಲಕ ಕೇವಲ ಅಸೂಯೆಯನ್ನು ದಾಟಲು ಬಯಸುತ್ತೇವೆ. ಕೆಲವೊಮ್ಮೆ ದಾಳಿ ಮಾಡುತ್ತೇವೆ—ನಾವು ದುರ್ಬಲರಾಗಿದ್ದೇವೆ ಎಂಬುದನ್ನು ಮರೆಮಾಚಲು.
ಒಬ್ಬನಿಗೆ ಸ್ನೇಹಿತ ಬೇಕೆಂದರೆ, ಅವನು ಆ ಸ್ನೇಹಿತನಿಗಾಗಿ ಯುದ್ಧ ಮಾಡಲು ಸಿದ್ಧನಿರಬೇಕು: ಮತ್ತು ಯುದ್ಧ ಮಾಡಲು, ಒಬ್ಬನು ಶತ್ರುವಾಗುವ ಸಾಮರ್ಥ್ಯ ಹೊಂದಿರಬೇಕು.
ಒಬ್ಬನು ತನ್ನ ಸ್ನೇಹಿತನಲ್ಲಿರುವ 'ಶತ್ರು'ವನ್ನು ಗೌರವಿಸಬೇಕು. ನಿನ್ನ ಸ್ನೇಹಿತನ ಹತ್ತಿರ ಹೋಗಿ, ಅವನಲ್ಲಿ ಕರಗದೇ ಇರಲು ಸಾಧ್ಯವೇ?
ಒಬ್ಬನ ಸ್ನೇಹಿತನೇ ಅವನ ಪಾಲಿನ ಅತ್ಯುತ್ತಮ ಶತ್ರುವಾಗಿರಬೇಕು. ನೀನು ಅವನನ್ನು ವಿರೋಧಿಸಿದಾಗ ಮಾತ್ರ ಅವನ ಹೃದಯಕ್ಕೆ ಅತಿ ಹತ್ತಿರವಾಗುವೆ.
ನಿನ್ನ ಸ್ನೇಹಿತನ ಮುಂದೆ ನೀನು ಯಾವುದೇ ಬಟ್ಟೆ ಧರಿಸುವುದಿಲ್ಲವೇ? ಅವನ ಮೇಲಿನ ಗೌರವಕ್ಕಾಗಿಯೇ ನೀನು ಇರುವ ಹಾಗೆಯೇ ಕಾಣಿಸಿಕೊಳ್ಳುವೆಯಾ? ಆದರೆ ಆ ಕಾರಣದಿಂದಲೇ ಅವನು ನಿನ್ನನ್ನು ತಿರಸ್ಕರಿಸಬಹುದು!
ತನ್ನ ಬಗ್ಗೆ ಏನನ್ನೂ ಮುಚ್ಚಿಡದವನು ಇತರರಿಗೆ ಆಘಾತ ನೀಡುತ್ತಾನೆ: ಬೆತ್ತಲೆತನಕ್ಕೆ ಹೆದರಲು ನಿಮಗೆ ಅಷ್ಟೊಂದು ಕಾರಣಗಳಿವೆ! ಹೌದು, ಒಂದು ವೇಳೆ ನೀವು ದೇವತೆಗಳಾಗಿದ್ದರೆ, ಆಗ ನೀವು ಬಟ್ಟೆ ಧರಿಸಲು ನಾಚಿಕೆಪಡುತ್ತಿದ್ದಿರಿ!
ನಿನ್ನ ಸ್ನೇಹಿತನಿಗಾಗಿ ನೀನು ಎಷ್ಟು ಅಲಂಕಾರ ಮಾಡಿಕೊಂಡರೂ ಸಾಲದು; ಏಕೆಂದರೆ ನೀನು ಅವನ ಪಾಲಿಗೆ ಒಂದು ಬಾಣದಂತೆ ಮತ್ತು ಅತಿಮಾನವನ ಕಡೆಗಿನ ಹಂಬಲದಂತೆ ಇರಬೇಕು.
ನಿನ್ನ ಸ್ನೇಹಿತ ನಿದ್ರಿಸುವಾಗ ಹೇಗೆ ಕಾನುವನೆಂದು ನೀನು ನೋಡಿರುವೆಯಾ? ನಿನ್ನ ಸ್ನೇಹಿತನ ನಿಜ ಮುಖ ಹೇಗಿದೆ ಎಂದು ತಿಳಿಯಲು? ಅದು ಒಂದು ಒರಟಾದ ಮತ್ತು ಅಪೂರ್ಣವಾದ ಕನ್ನಡಿಯಲ್ಲಿ ಕಾಣುವ ನಿನ್ನದೇ ಮುಖದ ಪ್ರತಿಬಿಂಬ.
ನಿನ್ನ ಸ್ನೇಹಿತನ ಮೇಲಿನ ಕರುಣೆಯು ಒಂದು ಕಠಿಣವಾದ ಕವಚದ ಅಡಿಯಲ್ಲಿ ಅಡಗಿರಲಿ; ಅದನ್ನು ಕಚ್ಚಿದಾಗ ಹಲ್ಲು ಮುರಿಯುವಂತಿರಲಿ. ಆಗಲೇ ಅದಕ್ಕೆ ಒಂದು ಮೃದುತ್ವ ಮತ್ತು ಮಾಧುರ್ಯ ಬರುತ್ತದೆ.
ನೀನು ನಿನ್ನ ಸ್ನೇಹಿತನಿಗೆ ಶುದ್ಧ ಗಾಳಿ, ಏಕಾಂತ, ಆಹಾರ ಮತ್ತು ಔಷಧಿಯಂತೆ ಇರುವೆಯಾ? ಅನೇಕರು ತಮ್ಮ ಸ್ವಂತ ಸಂಕೋಲೆಗಳನ್ನು ಬಿಡಿಸಿಕೊಳ್ಳಲು ಸಾಧ್ಯವಾಗದಿದ್ದರೂ, ತಮ್ಮ ಸ್ನೇಹಿತನಿಗೆ ವಿಮೋಚಕರಾಗಿರುತ್ತಾರೆ.
ನೀನು ಗುಲಾಮನೇ? ಹಾಗಿದ್ದರೆ ನೀನು ಸ್ನೇಹಿತನಾಗಲು ಸಾಧ್ಯವಿಲ್ಲ. ನೀನು ಸರ್ವಾಧಿಕಾರಿಯೇ? ಹಾಗಿದ್ದರೆ ನಿನಗೆ ಸ್ನೇಹಿತರಿರಲು ಸಾಧ್ಯವಿಲ್ಲ.
ಬಹಳ ಕಾಲದಿಂದ ಹೆಣ್ಣಿನಲ್ಲಿ ಒಬ್ಬ ಗುಲಾಮ ಮತ್ತು ಒಬ್ಬ ಸರ್ವಾಧಿಕಾರಿ ಅಡಗಿದ್ದಾರೆ. ಆ ಕಾರಣದಿಂದ ಹೆಣ್ಣು ಇನ್ನೂ ಸ್ನೇಹಕ್ಕೆ ಅರ್ಹಳಾಗಿಲ್ಲ; ಅವಳಿಗೆ ತಿಳಿದಿರುವುದು ಕೇವಲ ಪ್ರೀತಿ ಮಾತ್ರ.
ಹೆಣ್ಣಿನ ಪ್ರೇಮದಲ್ಲಿ ಅವಳು ಪ್ರೀತಿಸದ ಎಲ್ಲದರ ಬಗ್ಗೆ ಅನ್ಯಾಯ ಮತ್ತು ಕುರುಡುತನವಿರುತ್ತದೆ. ಹೆಣ್ಣು ಇನ್ನೂ ಸ್ನೇಹಕ್ಕೆ ಸಮರ್ಥಳಾಗಿಲ್ಲ: ಅವರಿನ್ನೂ ಬೆಕ್ಕುಗಳು ಮತ್ತು ಹಕ್ಕಿಗಳಂತೆ. ಅಥವಾ ಹೆಚ್ಚೆಂದರೆ ಹಸುಗಳಂತೆ.
ಹೆಣ್ಣು ಇನ್ನೂ ಸ್ನೇಹಕ್ಕೆ ಸಮರ್ಥಳಾಗಿಲ್ಲ ಸರಿ. ಆದರೆ ಪುರುಷರೇ, ನಿಮ್ಮಲ್ಲಿ ಎಷ್ಟು ಜನ ಸ್ನೇಹಕ್ಕೆ ಸಮರ್ಥರಾಗಿದ್ದೀರಿ ಎಂದು ನನಗೆ ಹೇಳಿ?
ನಿಮ್ಮ ಆತ್ಮದ ಬಡತನ ಮತ್ತು ಕೀಳುತನ ಎಂತಹದ್ದು! ನೀವು ನಿಮ್ಮ ಸ್ನೇಹಿತನಿಗೆ ಎಷ್ಟು ನೀಡುತ್ತೀರೋ, ಅಷ್ಟನ್ನು ನಾನು ನನ್ನ ಶತ್ರುವಿಗೂ ನೀಡುತ್ತೇನೆ, ಮತ್ತು ಅದರಿಂದ ನಾನು ಬಡವನಾಗುವುದಿಲ್ಲ.
ಇಲ್ಲಿರುವುದು ಕೇವಲ ಒಡನಾಟ; ಆದರೆ ಸ್ನೇಹವು ಮೌಲ್ಯಯುತವಾಗಲಿ!
- ಹೀಗೆ ಹೇಳಿದನು ಜರತುಷ್ಟ್ರ.
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ