ಮಂಗಳವಾರ, ಏಪ್ರಿಲ್ 7, 2026

2. ಸದ್ಗುಣದ ಪಾಠಶಾಲೆಗಳು

ಮಂಗಳವಾರ, ಏಪ್ರಿಲ್ 7, 2026
ಜನರು ಜರತುಷ್ಟ್ರನಿಗೆ ಒಬ್ಬ ಒಬ್ಬ ಜ್ಞಾನಿಯನ್ನು ಪರಿಚಯಿಸಿದರು; ಅವನು ನಿದ್ರೆ ಮತ್ತು ಸದ್ಗುಣದ ಬಗ್ಗೆ ಚೆನ್ನಾಗಿ ಉಪನ್ಯಾಸ ನಾಡಬಲ್ಲವನಾಗಿದ್ದನು. ಇದರಿಂದಾಗಿ ಅವನಿಗೆ ಬಹಳ ಗೌರವ ಮತ್ತು ಸಂಭಾವನೆ ಸಿಗುತ್ತಿತ್ತು. ಎಲ್ಲಾ ಯುವಕರು ಅವನ ಮುಂದೆ ಕುಳಿತು ಪಾಠ ಕೇಳುತ್ತಿದ್ದರು. ಜರತುಷ್ಟ್ರನು ಅವನ ಬಳಿಗೆ ಹೋಗಿ, ಯುವಕರ ನಡುವೆ ಕುಳಿತುಕೊಂಡನು. ಆ ಜ್ಞಾನಿ ಹೀಗೆ ಹೇಳಿದನು:

"ನಿದ್ರೆಯ ಮುಂದೆ ಗೌರವದಿಂದ ಮತ್ತು ವಿನಯದಿಂದ ಇರಿ! ಇದು ಮೊದಲನೇ ನಿಯಮ! ಯಾರಿಗೆ ಸರಿಯಾಗಿ ನಿದ್ರೆ ಬರುವುದಿಲ್ಲವೋ ಮತ್ತು ಯಾರು ರಾತ್ರಿ ಎಚ್ಚರವಾಗಿರುತ್ತಾರೋ ಅವರಿಂದ ದೂರವಿರಿ!

ಒಬ್ಬ ಕಳ್ಳನೂ ಸಹ ನಿದ್ರೆಯ ಮುಂದೆ ವಿನಯದಿಂದಿರುತ್ತಾನೆ; ಅವನು ರಾತ್ರಿಯಲ್ಲಿ ಸದ್ದಿಲ್ಲದೆ ಕಳ್ಳತನ ಮಾಡುತ್ತಾನೆ. ಆದರೆ ಕಾವಲುಗಾರನು ವಿನಯವಿಲ್ಲದವನು; ಅವನು ತನ್ನ ಪೀಪಿಯನ್ನು ಜೋರಾಗಿ ಊದುತ್ತಾನೆ.

ನಿದ್ರಿಸುವುದು ಸಣ್ಣ ಕಲೆಯಲ್ಲ: ಸರಿಯಾಗಿ ನಿದ್ರೆ ಮಾಡಲು, ಹಗಲೆಲ್ಲಾ ಎಚ್ಚರವಾಗಿರುವುದು ಅಗತ್ಯ.

ದಿನಕ್ಕೆ ಹತ್ತು ಬಾರಿ ನೀನು ನಿನ್ನನ್ನೇ ಗೆಲ್ಲಬೇಕು; ಅದು ನಿನಗೆ ಆರೋಗ್ಯಕರ ಆಯಾಸ ನೀಡುತ್ತದೆ ಮತ್ತು ಇದು ಆತ್ಮಕ್ಕೆ ಔಷಧವಿದ್ದಂತೆ.

ಹತ್ತು ಬಾರಿ ನೀನು ನಿನ್ನೊಂದಿಗೆ ರಾಜಿ ಮಾಡಿಕೊಳ್ಳಬೇಕು; ಏಕೆಂದರೆ ನಿನ್ನನ್ನು ನೀನು ಗೆಲ್ಲುವುದು ಕಹಿಯಾದ ಕೆಲಸ, ಮತ್ತು ಸಮಾಧಾನ ಇಲ್ಲದವರಿಗೆ ಸರಿಯಾಗಿ ನಿದ್ರೆ ಬರುವುದಿಲ್ಲ.

ಹಗಲಿನಲ್ಲಿ ನೀನು ಹತ್ತು ಸತ್ಯಗಳನ್ನು ಹುಡುಕಬೇಕು; ಇಲ್ಲದಿದ್ದರೆ, ನೀನು ರಾತ್ರಿಯಲ್ಲಿ ಸತ್ಯವನ್ನು ಹುಡುಕುತ್ತಾ ಕೂರುವೆ. ನಿನ್ನ ಆತ್ಮವು ಹಸಿದಿರುತ್ತದೆ.

ದಿನಕ್ಕೆ ಹತ್ತು ಬಾರಿ ನೀನು ನಗಬೇಕು ಮತ್ತು ಹರ್ಷದಿಂದಿರಬೇಕು; ಇಲ್ಲವಾದರೆ ನಿನ್ನ ಹೊಟ್ಟೆ— ಎಲ್ಲಾ ದುಃಖಗಳ ತಂದೆ—ರಾತ್ರಿ ನಿನ್ನನ್ನು ಕಾಡುತ್ತದೆ.

ಇದು ಕೆಲವರಿಗೆ ಮಾತ್ರ ಗೊತ್ತು, ಚೆನ್ನಾಗಿ ನಿದ್ರೆ ಮಾಡಲು ನಿನಗೆ ಎಲ್ಲಾ ಸದ್ಗುಣಗಳು ಇರಬೇಕು. ನಾನು ಸುಳ್ಳು ಸಾಕ್ಷಿ ಹೇಳಲೇ? ನಾನು ವ್ಯಭಿಚಾರ ಮಾಡಲೇ? ನಾನು ನನ್ನ ನೆರೆಹೊರೆಯವರ ದಾಸಿಯರನ್ನು ಬಯಸಲೇ? ಇವೆಲ್ಲವೂ ಒಳ್ಳೆಯ ನಿದ್ರೆಗೆ ಸರಿ ಹೊಂದುವುದಿಲ್ಲ.

ಮತ್ತು ನಿನ್ನಲ್ಲಿ ಎಲ್ಲಾ ಸದ್ಗುಣಗಳಿದ್ದರೂ, ಇನ್ನೊಂದು ವಿಷಯ ಬಹಳ ಮುಖ್ಯ: ಸರಿಯಾದ ಸಮಯದಲ್ಲಿ ಆ ಸದ್ಗುಣಗಳನ್ನೂ ನಿದ್ರೆಗೆ ಕಳುಹಿಸಬೇಕು.

ಆ ಸದ್ಗುಣಗಳೆಂಬ ಹೆಂಗಸರು ತಮ್ಮತಮ್ಮಲ್ಲೇ ಜಗಳವಾಡಬಾರದು! ಮತ್ತು ನಿನ್ನ ಬಗ್ಗೆಯೂ ಜಗಳವಾಡಬಾರದು!

ದೇವರೊಂದಿಗೆ ಮತ್ತು ನಿನ್ನ ನೆರೆಹೊರೆಯವರೊಂದಿಗೆ ಶಾಂತಿಯಿಂದ ಇರು: ಒಳ್ಳೆಯ ನಿದ್ರೆಗೆ ಅದೇ ಬೇಕು. ಅಷ್ಟೇ ಅಲ್ಲ, ನಿನ್ನ ನೆರೆಯವರ ಭೂತಗಳೊಂದಿಗೂ ಸಹ ಶಾಂತಿಯಿಂದಿರು! ಇಲ್ಲದಿದ್ದರೆ ಅವೂ ರಾತ್ರಿ ನಿನಗೆ ಕಾಟ ಕೊಡುತ್ತವೆ.

ಸರ್ಕಾರಕ್ಕೆ ಗೌರವ ಕೊಡು ಮತ್ತು ವಿಧೇಯವಾಗಿರು, ಆ ಸರ್ಕಾರವು ಅಪ್ರಾಮಾಣಿಕವಾಗಿದ್ದರೂ ಸರಿಯೇ! ಒಳ್ಳೆಯ ನಿದ್ರೆಗೆ ಅದು ಬೇಕು. ಅಧಿಕಾರವು ಅಂಕುಡೊಂಕಾಗಿ ನಡೆದರೆ ನಾನೇನು ಮಾಡಲಿ?

ಯಾರು ತನ್ನ ಕುರಿಗಳನ್ನು ಅತಿ ಹಸಿರಾದ ಹುಲ್ಲುಗಾವಲಿಗೆ ಕರೆದೊಯ್ಯುತ್ತಾನೋ ಅವನೇ ನನಗೆ ಶ್ರೇಷ್ಠ ನಾಯಕ: ಅದು ಒಳ್ಳೆಯ ನಿದ್ರೆಗೆ ಪೂರಕ.

ನನಗೆ ಹೆಚ್ಚು ಗೌರವಗಳೂ, ದೊಡ್ಡ ಸಂಪತ್ತೂ ಬೇಡ: ಅವು ಅಸ್ವಸ್ಥತೆಯನ್ನು ಉಂಟುಮಾಡುತ್ತವೆ. ಆದರೆ ಒಳ್ಳೆಯ ಹೆಸರಿಲ್ಲದೆ ಮತ್ತು ಸ್ವಲ್ಪ ಸಂಪತ್ತಿಲ್ಲದೆ ನಿದ್ರೆ ಕೆಟ್ಟದ್ದು.

ಕೆಟ್ಟ ಗೆಳೆಯರ ಗುಂಪಿಗಿಂತ ಸಣ್ಣ ಗುಂಪು ನನಗೆ ಇಷ್ಟ: ಆದರೆ ಅವರು ಸರಿಯಾದ ಸಮಯಕ್ಕೆ ಬಂದು ಹೋಗಬೇಕು. ಇದು ಒಳ್ಳೆಯ ನಿದ್ರೆಗೆ ಸಹಾಯ ಮಾಡುತ್ತದೆ.

ಹಾಗೆಯೇ, ನನಗೆ ತಿಳುವಳಿಕೆ ಕಡಿಮೆ ಇರುವ ಜನರು ಇಷ್ಟ: ಅವರು ನಿದ್ರೆಗೆ ಸಹಾಯ ಮಾಡುತ್ತಾರೆ. ನೀವು ಯಾವಾಗಲೂ ಅವರ ಮಾತನ್ನು ಒಪ್ಪಿಕೊಂಡರೆ ಅವರು ಇನ್ನೂ ಖುಷಿಯಾಗಿರುತ್ತಾರೆ.

ಸದ್ಗುಣವಂತನ ಹಗಲು ಹೀಗೆ ಕಳೆಯುತ್ತದೆ. ರಾತ್ರಿ ಬಂದಾಗ, ನಾನು ನಿದ್ರೆಯನ್ನು ಕರೆಯದಂತೆ ಜಾಗ್ರತೆ ವಹಿಸುತ್ತೇನೆ. ಆ ನಿದ್ರೆ ಎಂಬುದು ಸದ್ಗುಣಗಳ ಯಜಮಾನ, ಅದು ಯಾರಿಂದಲೂ ಕರೆಸಿಕೊಳ್ಳಲು ಇಷ್ಟಪಡುವುದಿಲ್ಲ!

ಬದಲಾಗಿ, ದಿನವೆಲ್ಲಾ ನಾನು ಮಾಡಿದ ಮತ್ತು ಆಲೋಚಿಸಿದ ಸಂಗತಿಗಳನ್ನು ಒಂದು ಹಸುವಿನಂತೆ ತಾಳ್ಮೆಯಿಂದ ಮೆಲುಕು ಹಾಕುತ್ತಾ, ನನ್ನನ್ನೇ ನಾನು ಕೇಳಿಕೊಳ್ಳುತ್ತೇನೆ: ಇಂದು ನಾನು ನನ್ನೊಡನೆ ಗೆದ್ದ ಆ ಹತ್ತು ಸಂದರ್ಭಗಳು ಯಾವುವು? ಆ ಹತ್ತು ಶಾಂತಿಗಳು, ಹತ್ತು ಸತ್ಯಗಳು ಮತ್ತು ನನ್ನ ಹೃದಯವನ್ನು ನಲಿಸಿದ ಆ ಹತ್ತು ನಗುಗಳು ಯಾವುವು?

ಹೀಗೆ ನಲವತ್ತು ಆಲೋಚನೆಗಳ ಜೊತೆ ಮಲಗಿರುವಾಗ, ಇದ್ದಕ್ಕಿದ್ದಂತೆ ನಿದ್ರೆ ನನ್ನನ್ನು ಆವರಿಸುತ್ತದೆ—ಅದು ನಾನು ಕರೆಯದೆಯೇ ಬಂದ ಸದ್ಗುಣಗಳ ಯಜಮಾನ.

ನಿದ್ರೆಯು ನನ್ನ ಕಣ್ಣನ್ನು ತಟ್ಟುತ್ತದೆ, ಆಗ ಕಣ್ಣು ಭಾರವಾಗುತ್ತದೆ. ನಿದ್ರೆಯು ನನ್ನ ಬಾಯಿಯನ್ನು ಮುಟ್ಟುತ್ತದೆ, ಆಗ ಬಾಯಿ ತೆರೆದೇ ಇರುತ್ತದೆ.

ನಿಜಕ್ಕೂ, ಅದು ಮೆಲ್ಲನೆ ಬರುತ್ತದೆ, ಈ ಪ್ರೀತಿಯ ಕಳ್ಳನಂತೆ ನನ್ನ ಆಲೋಚನೆಗಳನ್ನೇ ಕದಿಯುತ್ತದೆ: ಆಗ ನಾನು ಈ ಪಾಠ ಮಾಡುವ ಕುರ್ಚಿಯಂತೆ ಮೂರ್ಖನಾಗಿ ನಿಂತಿರುತ್ತೇನೆ.

"ಆದರೆ ನಾನು ಹೆಚ್ಚು ಹೊತ್ತು ನಿಂತಿರುವುದಿಲ್ಲ: ನಾನು ಆಗಲೇ ಮಲಗಿರುತ್ತೇನೆ."

ಜರತುಷ್ಟ್ರನು ಆ ಜ್ಞಾನಿ ಹೀಗೆ ಮಾತನಾಡುವುದನ್ನು ಕೇಳಿದಾಗ, ತನ್ನ ಹೃದಯದಲ್ಲಿ ನಕ್ಕನು: ಏಕೆಂದರೆ ಅವನಿಗೆ ಒಂದು ಹೊಸ ಬೆಳಕು ದೊರಕಿತ್ತು. ಅವನು ತನ್ನ ಹೃದಯಕ್ಕೆ ಹೀಗೆಂದನು:

"ಈ ನಲವತ್ತು ಆಲೋಚನೆಗಳ ಜ್ಞಾನಿ ಒಬ್ಬ ಮೂರ್ಖನಂತೆ ಕಾಣುತ್ತಾನೆ: ಆದರೆ ಇವನಿಗೆ ಚೆನ್ನಾಗಿ ನಿದ್ರೆ ಮಾಡುವ ಕಲೆ ತಿಳಿದಿದೆ ಎಂದು ನಾನು ನಂಬುತ್ತೇನೆ.

ಈ ಜ್ಞಾನಿಯ ಬಳಿ ವಾಸಿಸುವವರು ಅದೃಷ್ಟವಂತರು! ಇಂತಹ ನಿದ್ರೆಯು ಸಾಂಕ್ರಾಮಿಕ—ದಪ್ಪನೆಯ ಗೋಡೆಯ ಆಚೆಗೂ ಇದು ಹರಡುತ್ತದೆ.

ಅವನ ಕುರ್ಚಿಯಲ್ಲೂ ಒಂದು ಮಾಯೆಯಿದೆ. ಸುಮ್ಮನೆ ಆ ಯುವಕರು ಈ ಸದ್ಗುಣದ ಉಪದೇಶಕನ ಮುಂದೆ ಕುಳಿತಿಲ್ಲ.

ಹಗಲೆಲ್ಲಾ ಜಾಗೃತರಾಗಿದ್ದು ರಾತ್ರಿ ಉತ್ತಮ ನಿದ್ರೆ ಮಾಡುವುದೇ ಇವನ ಜ್ಞಾನ. ನಿಜಕ್ಕೂ, ಜೀವನಕ್ಕೆ ಯಾವುದೇ ಅರ್ಥವಿಲ್ಲದಿದ್ದರೆ ಮತ್ತು ನಾನು ಯಾವುದಾದರೂ ಒಂದು ಮೂರ್ಖತನದ ಹಾದಿಯನ್ನು ಆರಿಸಿಕೊಳ್ಳಬೇಕಾಗಿದ್ದರೆ, ನನಗಿದು ಇಷ್ಟವಾಗುತ್ತಿತ್ತು.

ಹಳೆಯ ಕಾಲದಲ್ಲಿ ಜನರು ಸದ್ಗುಣದ ಗುರುಗಳನ್ನು ಯಾಕಾಗಿ ಹುಡುಕುತ್ತಿದ್ದರು ಎಂದು ಈಗ ನನಗೆ ತಿಳಿಯಿತು. ಅವರಿಗೆ ಒಳ್ಳೆಯ ನಿದ್ರೆ ಬೇಕಾಗಿತ್ತು, ಮತ್ತು ಅದಕ್ಕೆ ಅನುಕೂಲಕರ ಸದ್ಗುಣಗಳು.

ಆ ಎಲ್ಲಾ ಪ್ರಸಿದ್ಧ ಜ್ಞಾನಿಗಳಿಗೆ, ಜ್ಞಾನವೆಂದರೆ ಕನಸುಗಳಿಲ್ಲದ ನಿದ್ರೆ: ಅವರಿಗೆ ಜೀವನದ ಉನ್ನತ ಅರ್ಥ ತಿಳಿದಿರಲಿಲ್ಲ.

ಈಗಲೂ ಕೂಡ ಈ ಉಪದೇಶಕನಂತಹ ಕೆಲವರು ಇದ್ದಾರೆ, ಮತ್ತು ಅವರು ಯಾವಾಗಲೂ ಪ್ರಾಮಾಣಿಕರಾಗಿರುವುದಿಲ್ಲ: ಆದರೆ ಇವರ ಕಾಲ ಮುಗಿದಿದೆ. ಅವರು ಇನ್ನು ಹೆಚ್ಚು ಕಾಲ ನಿಲ್ಲಲಾರರು: ಅವರು ಆಗಲೇ ಮಲಗುತ್ತಿದ್ದಾರೆ.

ಈ ತೂಕಡಿಸುವವರು ಧನ್ಯರು: ಅವರು ಬೇಗನೆ ಗಾಢ ನಿದ್ರೆಗೆ ಜಾರುತ್ತಾರೆ."

ಜರತುಷ್ಟ್ರನು ಹೀಗೆ ಹೇಳಿದನು.

0 ಕಾಮೆಂಟ್‌(ಗಳು):

ಕಾಮೆಂಟ್‌‌ ಪೋಸ್ಟ್‌ ಮಾಡಿ

 
ಜರಥುಷ್ಟ್ರನ ಉಪದೇಶಗಳು. Design by Pocket - Fixed by Blogger templates